ನೆಲಮಂಗಲ: ಆ ದಂಪತಿಯ ಕನಸಿನಲ್ಲಿ ತಮ್ಮ ಮನೆಯ ಮುಂದಿರುವ ಹುಣಸೆ ಮರದಡಿ ನಿಧಿ ಇದೆ ಎಂದು ಅಶರೀರವಾಣಿ ನುಡಿಯುತ್ತಂತೆ. ಆ ನಿಧಿಯಾಸೆಗೆ ಗಂಡನೇ ಹೆಂಡತಿಯನ್ನ ಬಲಿಕೊಟ್ಟಿದ್ದಾನೆಂದು ಮೃತಳ ಪೋಷಕರು ಆರೋಪಸುತ್ತಿದ್ದರೆ, ಇತ್ತ ಗಂಡ ದೆವ್ವದ ಕಥೆಯನ್ನೇ ಕಟ್ಟಿದ್ದ. ಅಂದಹಾಗೇ ನಿಧಿಗೂ, ದೆವ್ವಕ್ಕೂ ಇರುವ ಸಂಬಂಧವದರೂ ಏನು ತಿಳಿಯಬೇಕಾದ್ರೆ ಈ ಸ್ಟೋರಿ ನೋಡಿ...
ಹೀಗೆ ಹೆಣವಾಗಿ ಮಲಗಿರುವ ಮಹಿಳೆ ಹೆಸರು ಹೀನಾಕೌಸರ್. ಈ ಫೋಟೋದಲ್ಲಿ ಕಾಣುತ್ತಿರುವವನ ಹೆಸರು ಮುನ್ಸೀಫ್ ಉಲ್ಲಾ. 13 ವರ್ಷಗಳ ಹಿಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲೂಕಿನ ಕೂತಘಟ್ಟ ಗ್ರಾಮದಲ್ಲಿ ಈ ದಂಪತಿ ವಾಸಿಸುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಜೀನಾ ಕೌಸರ್ ಮೃತಪಟ್ಟಿದ್ದಳು. ಜೀನಾಳ ಮೈತುಂಬಾ ಗಾಯಗಳಾಗಿದ್ದನ್ನು ಕಂಡು ಹೀನಾ ಕೌಸರ್ ಕುಟುಂಬಸ್ಥರು ಆಕೆಯ ಗಂಡ ಮತ್ತವರ ಮನೆಯವರು ಸೇರಿ ನಿಧಿ ಆಸೆಗಾಗಿ ನಮ್ಮ ಮಗಳನ್ನು ಕೊಂದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಹೆಂಡತಿ ಮೃತಪಟ್ಟಿದ್ದಕ್ಕೂ ನನಗೂ ಸಂಬಂಧವಿಲ್ಲ ಎಂದು ಗಂಡ ದೆವ್ವದ ಕಥೆ ಕಟ್ಟುತ್ತಿದ್ದಾನೆ.
ಈ ದಂಪತಿ ಮನೆಯ ಮುಂದೆ ಒಂದು ಹುಣಸೆ ಮರವಿದೆ. ಅದರ ಕೆಳಗೆ ನಿಧಿ ಇದೆ ಎಂದು ಹೇಳಲಾಗುತ್ತಿತ್ತು. ಆಕೆಯನ್ನ ಹುಣಸೆ ಮರಕ್ಕೆ ಕಟ್ಟಿ ರಕ್ತಸ್ರಾವ ಆಗುವವರೆಗೂ ಹೊಡೆದರೆ ನಿಧಿ ಸಿಗಬಹುದು ಎಂದು ಗಂಡನೇ ಕೊಂದಿದ್ದಾನೆ. ಅಷ್ಟೆ ಅಲ್ಲ, ಕಳೆದ ಮೂರು ತಿಂಗಳಿನಿಂದ ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿದ್ದ. ಅವರಿಗೆ ಶಿಕ್ಷೆ ಆಗಬೇಕು ಎಂದು ಮೃತಳ ಪೋಷಕರು ಒತ್ತಾಯಿಸಿದರು.
ಮೃತಳ ಪೋಷಕರ ಆರೋಪವನ್ನು ತಳ್ಳಿ ಹಾಕಿರುವ ಪತಿ ಮುನ್ಸೀಫ್ ಉಲ್ಲಾ, ನನ್ನ ಮಡದಿಯ ಕನಸಿನಲ್ಲಿ ನಿಧಿ ಬಗ್ಗೆ ಅಶರೀರವಾಣಿ ನುಡಿಯುತ್ತಿದ್ದದ್ದು ಸತ್ಯ. ಆಕೆ ನನ್ನ ಬಳಿ ಹೇಳಿಕೊಂಡಿದ್ದಳು. ಮನೆಯ ಮುಂದಿನ ಹುಣಸೆ ಮರದಡಿಯಲ್ಲಿ ನಿಧಿಯಿದೆ. ಬಲಿಕೊಟ್ಟು ತೆಗೆದುಕೊಳ್ಳಿ ಎಂಬ ಅಶರೀರವಾಣಿ ಕೇಳಿಸುತ್ತಿತ್ತು ಎಂದು ಪತ್ನಿ ತಿಳಿಸಿದ್ದಳಂತೆ. ಆದ್ರೆ ನಾನು ಅದರ ಬಗ್ಗೆ ಗಮನಿಸಿರಲಿಲ್ಲ. ಮಂಗಳವಾರ ರಾತ್ರಿ ಇದ್ದಕ್ಕಿದ್ದ ಹಾಗೆ ಎದ್ದು ಮರದ ಬಳಿ ಓಡಿ ಹೋದಳು. ನಿಧಿ ನಿಧಿ ಎಂದು ಕೂಗುತ್ತಿದ್ದಳು. ವಿಚಿತ್ರವಾಗಿ ವರ್ತಿಸುತ್ತಿದ್ದಳು. ನಾನು ಅಲ್ಲಿಂದ ಮನೆಗೆ ಕರೆ ತರುವಾಗ ಆಕೆ ನನ್ನನ್ನೇ ಎಳೆದಾಡಿದಳು. ಆಗ ಮೈಮೇಲೆ ಗಾಯಗಳು ಆಗಿವೆ. ಮನೆಗೆ ಕರೆತಂದ ನಂತರ ಆಕೆಗೆ ಏನಾಗಯಿತೋ ಏನೋ ಗೊತ್ತಿಲ್ಲ. ಅಷ್ಟರಲ್ಲೇ ಆಕೆ ಪ್ರಾಣ ಬಿಟ್ಟಿದ್ದಾಳೆ ಅಂತಾನೆ ಪತಿರಾಯ.
ಈ ಸಂಬಂಧ ಮಹಿಳೆ ಅನುಮಾನಾಸ್ಪದ ಸಾವು ಅಂತ ಪ್ರಕರಣ ದಾಖಲಿಸಿಕೊಂಡಿರುವ ಡಾಬಸ್‌ಪೇಟೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಈ ಸಾವಿನ ಹಿಂದೆ ಏನು ನಡೆದಿದೆ ಎಂಬುದನ್ನು ತಿಳಿಯಬೇಕೆಂದರೆ ಮರಣೋತ್ತರ ಪರೀಕ್ಷಾ ವರದಿ ಬರುವವರೆಗೂ ಕಾಯಬೇಕಿದೆ.