ಉತ್ತರ ಪ್ರದೇಶ: ದೇಶವನ್ನೇ ಬೆಚ್ಚಿಬೀಳಿಸಿದ್ದ 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಪರ ವಕೀಲ ಮಹೇಂದ್ರ ಸಿಂಗ್ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
2019ರ ಜುಲೈನಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿ ಬಳಿ ರೇಪ್ ಸಂತ್ರಸ್ತೆ ಹಾಗೂ ಮಹೇಂದ್ರ ಸಿಂಗ್ ಇದ್ದ ಕಾರು ಅಪಘಾತಕ್ಕೀಡಾಗಿತ್ತು. ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಇದು ಪೂರ್ವನಿಯೋಜಿತ ಕೃತ್ಯ ಎಂಬುದು ಬಯಲಾಗಿತ್ತು. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡ ಸಂತ್ರಸ್ತೆ ಮತ್ತು ಸಿಂಗ್ರನ್ನು ದೆಹಲಿಯ ಏಮ್ಸ್ಗೆ ದಾಖಲಿಸಲಾಗಿತ್ತು.
ಎರಡು ತಿಂಗಳ ಬಳಿಕ ಸಂತ್ರಸ್ತೆ ಡಿಸ್ಚಾರ್ಚ್ ಆಗಿದ್ದಳು. ಸಿಂಗ್ರನ್ನು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ತಿಳಿಸಿ ಮನೆಗೆ ಕಳುಹಿಸಲಾಗಿತ್ತು. ಬಳಿಕ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಹೇಂದ್ರ ಸಿಂಗ್ರ ಸ್ಥಿತಿ ನಿನ್ನೆ ರಾತ್ರಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಅಸುನೀಗಿದ್ದಾರೆ.
ಉನ್ನಾವೋ ಪ್ರಕರಣ:
- 2017ರಲ್ಲಿ ಉತ್ತರ ಪ್ರದೇಶದ ಉನ್ನಾವೋ ಪ್ರದೇಶದ 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿತ್ತು. ಕೃತ್ಯದ ಆರೋಪ ಅಂದಿನ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಮೇಲಿತ್ತು.
- 2018ರಲ್ಲಿ ಸಂತ್ರಸ್ತೆಯ ತಂದೆಯ ಮೇಲೆ ಸುಳ್ಳು ಆರೋಪಹೊರಿಸಿ ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿ ಬಾಲಕಿಯ ತಂದೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಬಳಿಕ ಇದು ಕೊಲೆ ಎಂಬುದು ತಿಳಿದು ಬಂದಿತು.
- ಬಳಿಕ ಈ ಪ್ರಕರಣ ರಾಷ್ಟ್ರೀಯ ಸುದ್ದಿ ವಾಹಿನಿಗಳ ಮೂಲಕ ದೇಶಾದ್ಯಂತ ಹಬ್ಬಿ ಜನರ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಕೇಸ್ನ ಹೊಣೆ ಹೊತ್ತ ಸಿಬಿಐ ಕುಲದೀಪ್ ಸೆಂಗರ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿತು.
- 2019ರ ಜುಲೈನಲ್ಲಿ ಸಂತ್ರಸ್ತೆ ಹಾಗೂ ಮಹೇಂದ್ರ ಸಿಂಗ್ ಇದ್ದ ಕಾರನ್ನು ಅಪಘಾತಕ್ಕೊಳಪಡಿಸಲಾಗಿತ್ತು. ಘಟನೆಯಲ್ಲಿ ಸಂತ್ರಸ್ತೆಯ ಇಬ್ಬರು ಸಂಬಂಧಿಕರು ಮೃತಪಟ್ಟಿದ್ದು, ಸಂತ್ರಸ್ತೆ ಹಾಗೂ ಸಿಂಗ್ ಗಾಯಗೊಂಡಿದ್ದರು. ಆಕೆ ಗುಣಮುಖಳಾಗಿ ಹೊರಬಂದ ಬಳಿಕ ನಾಲ್ವರು ದುಷ್ಕರ್ಮಿಗಳು ಆಕೆಗೆ ಬೆಂಕಿ ಹಚ್ಚಿದ್ದರು. ಶೇ.90ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಆಕೆ 2019ರ ಡಿ.6ರಂದು ಮೃತಪಟ್ಟಿದ್ದಳು.
- 2019ರ ಡಿ.16 ರಂದು ಶಾಸಕ ಸೆಂಗರ್ ದೋಷಿ ಎಂಬುದು ಸಾಬೀತಾಯಿತು. ಇವರಿಗೆ ಜೀವಾವಧಿ ಶಿಕ್ಷೆಯನ್ನೂ ಪ್ರಕಟಿಸಲಾಯಿತು.
- 2020ರ ಮಾರ್ಚ್ನಲ್ಲಿ ಸಂತ್ರಸ್ತೆಯ ತಂದೆ ಕೊಲೆ ಪ್ರಕರಣದಲ್ಲಿ ಕುಲದೀಪ್ ಸೆಂಗರ್, ಅವರ ಸಹೋದರು ಸೇರಿದಂತೆ ಏಳು ಮಂದಿಗೆ ದೆಹಲಿ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿತು.