ನವದೆಹಲಿ: ಇಲ್ಲಿನ ಶಹದಾರಾದ ಜಿಟಿಬಿ ಎನ್‌ಕ್ಲೇವ್ ಪ್ರದೇಶದಲ್ಲಿ ಮೆಡಿಕಲ್ನಿಂದ ತಪ್ಪಾದ ಔಷಧಿ ಪಡೆದು ಅದನ್ನು ಸೇವಿಸಿದ ಪರಿಣಾಮ ಎರಡು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂಬ ಆರೋಪದ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬದಲಿ ಔಷಧಿ ಸೇವಿಸಿ ಅಸ್ವಸ್ಥ ಆಗಿದ್ದ ಬಾಲಕಿಯನ್ನು ಆಕೆಯ ತಾಯಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಾಲಕಿ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದಳು. ಆಕೆಯ ತಾಯಿ ಹತ್ತಿರದ ಮೆಡಿಕಲ್ ಶಾಪ್ಗೆ ಕರೆದೊಯ್ದು ತಪ್ಪಾದ ಔಷಧಿ ಖರೀದಿಸಿ ಬಾಲಕಿಗೆ ನೀಡಿದ್ದಾರೆ. ಜ್ವರ ಕಡಿಮೆ ಆಗದಿದ್ದಾಗ ಮತ್ತೆ ಅದೇ ಮಳಿಗೆಯಿಂದ ಔಷಧಿ ಖರೀದಿಸಿ ನೀಡಿದ್ದಾರೆ. ಔಷಧಿ ರಿಯಾಕ್ಷನ್ ಆಗಿದ್ದು, ಬಾಲಕಿ ರಕ್ತ ವಾಂತಿ ಮಾಡಿಕೊಂಡಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ.
ಪ್ರಕರಣದ ಬಗ್ಗೆ ಶಹದಾರಾದ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.