ಮೈಸೂರು: ಬೈಕ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹಂದನಹಳ್ಳಿ ಗೇಟ್ ಬಳಿ ನಡೆದಿದೆ.
ವಿಪ್ರೋ ಟೆಕ್ನಾಲಜೀಸ್ ಕಂಪನಿಯ ಉದ್ಯೋಗಿ ಎಸ್.ಗಣೇಶ್ (37) ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ. ಮೈಸೂರಿನಿಂದ ಹುಣಸೂರಿನಲ್ಲಿರುವ ತಮ್ಮ ಮನೆಗೆ ಪಲ್ಸರ್ ಬೈಕ್ನಲ್ಲಿ ಗಣೇಶ್ ತೆರಳುತ್ತಿದ್ದ ವೇಳೆ ಬಿಳಿಕೆರೆಯ ಹಂದನಹಳ್ಳಿ ರಸ್ತೆ ಕಡೆಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಬೈಕ್ಗೆ ಗುದ್ದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದು ರಸ್ತೆ ಮೇಲೆ ಒದ್ದಾಡುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಗಣೇಶ್ ತಂದೆ ಶ್ರೀನಾಥ್ ಹುಣಸೂರು ನಗರದ ಜೆಎಲ್ಬಿ ರಸ್ತೆಯ ಜಿ.ವಿ. ಟ್ರೇಡರ್ಸ್ ಮಾಲೀಕರಾಗಿದ್ದು, ಎಂಟು ವರ್ಷಗಳ ಹಿಂದೆ ಮೊದಲ ಮಗ ವಿಘ್ನೇಶ್ನನ್ನು ಕಿಡಿಗೇಡಿಗಳು ಕೊಲೆ ಮಾಡಿದ್ದರು. ಈಗ ಮತ್ತೊಬ್ಬ ಮಗನನ್ನು ಅಪಘಾತದಲ್ಲಿ ಕಳೆದುಕೊಂಡಿದ್ದಾರೆ. ಅಪಘಾತ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.