ಬೆಂಗಳೂರು: ಆಕೆ ಪೋನ್ ಕಾಲ್ ಬಂತು ಎಂದು ಮೊಬೈಲ್ ನಲ್ಲಿ ಮಗ್ನಳಾಗಿದ್ದಳು. ಈ ವೇಳೆ ಏಕಾಏಕಿ ಬಂದ ಕಿರಾತಕನೋರ್ವ ಮೊಬೈಲ್ ಕಸಿದು ಪರಾರಿಯಾಗಿದ್ದ. ಸಹಾಯ ಕೋರಿ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆದರೆ, ಯುವತಿ ನೀಡಿದ ದೂರೇ ಬೇರೆ, ಪೊಲೀಸರು ದಾಖಲಿಸಿಕೊಂಡಿರುವ ದೂರೇ ಬೇರೆಯಾಗಿದೆಯಂತೆ. ಇಷ್ಟಕ್ಕೂ ಈ ಘಟನೆ ನಡೆದಿರೋದು ನಗರದ ಕೆಂಪಾಪುರದ ಗೋಪಾಲಪ್ಪ ಲೇಔಟ್ ನಲ್ಲಿ.
ಇಲ್ಲಿನ ನಿವಾಸಿ ಸಂಯುಕ್ತ ಮೊಬೈಲ್‌ನಲ್ಲಿ ಮಾತನಾಡುತ್ತಾ ಮನೆ ಹೊರಗೆ ನಿಂತಿದ್ದಾಳೆ. ಈ ವೇಳೆ ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಬಂದಿರುವ ಕಳ್ಳ ಆಕೆಯನ್ನು ಗಮನಿಸಿದ್ದಾನೆ. ಅಕ್ಕಪಕ್ಕದ ಗಲ್ಲಿಗಳನ್ನ ಎರಡು ಮೂರು ರೌಂಡ್ ಹಾಕಿದ್ದಾನೆ. ನಂತರ ಯುವತಿ ಬಿಟ್ರೆ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಕ್ಷಣಾರ್ಧದಲ್ಲಿ ಯುವತಿಯ ಕಡೆ ಬೈಕ್ ನಲ್ಲಿ ಬಂದಿರೋ ಖದೀಮ ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದಾನೆ.
ಸಿಸಿಟಿವಿ ದೃಶ್ಯವನ್ನೇ ಮರೆ ಮಾಚಿದ್ರಾ ಪೊಲೀಸ್?
ಯುವತಿ ಕೈನಲ್ಲಿದ್ದ ಮೊಬೈಲ್ ಅನ್ನು ಕಳ್ಳ ಎಗರಿಸಿರುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿ ಸಿಸಿಟಿವಿ ದೃಶ್ಯಾವಳಿ ಸಮೇತ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆದರೆ ಪೊಲೀಸರು ಎಫ್ಐಆರ್ ನಲ್ಲಿ ಯುವತಿ ಮನೆಯ ಕಾಂಪೌಂಡ್ ಮೇಲೆ ಮೊಬೈಲ್ ಇಟ್ಟು ನೀರು ಕುಡಿಯಲು ಮನೆ ಒಳಗೆ ತೆರಳಿದ್ದಾರೆ. ನಂತರ ಹೊರ ಬಂದು ನೋಡಿದಾಗ ಯಾರೋ ಮೊಬೈಲ್ ಕಳವು ಮಾಡಿದ್ದಾರೆ ಅಂತ ಉಲ್ಲೇಖಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಸುಲಿಗೆ ಪ್ರಕರಣವನ್ನು ಕಳ್ಳತನದ ಸೆಕ್ಷನ್ ಅಡಿಯಲ್ಲಿ FIR ದಾಖಲಿಸಿದ್ದಾರೆ. IPC ಸೆಕ್ಷನ್ 384 ಸುಲಿಗೆ ಪ್ರಕರಣದಲ್ಲಿ 3 ವರ್ಷಗಳ ಕಾಲ ಆರೋಪಿಗೆ ಶಿಕ್ಷೆ ವಿಧಿಸಲಾಗುತ್ತೆ. ಆದರೆ ಪೊಲೀಸರು IPC 379 ಕಳ್ಳತನದ ಕೇಸ್ ಅಡಿಯಲ್ಲಿ FIR ಫೈಲ್ ಮಾಡಿ ಕಳ್ಳನಿಗೆ ತ್ವರಿತವಾಗಿ ಜಾಮೀನು ಸಿಗುವಂತೆ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಯುವತಿಯದ್ದಾಗಿದೆ.