ಮುಂಬೈ: ಒಂದೆಡೆ ಕೊರೊನಾ ಸೋಂಕು ತಗುಲಿ ರೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಆತನ ಮನೆಯಲ್ಲಿ ಕಳ್ಳ ಬಂದು ಮನೆಯಲ್ಲಿದ್ದ ವಸ್ತುಗಳನ್ನ ದೋಚಿಕೊಂಡು ಪರಾರಿಯಾಗಿದ್ದಾನೆ.
ದೇಶದಲ್ಲಿ ಮಹಾಮಾರಿ ಕೋವಿಡ್-19 ಅಟ್ಟಹಾಸ ಮುಂದುವರೆದಿದ್ದು, ಪ್ರಕರಣಗಳ ಹಾಗೂ ಸಾವಿನ ಪೈಕಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಆರು ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ ಸಿಂಹಪಾಲು ಮುಂಬೈದ್ದಾಗಿದೆ. ಆದರೆ ಕೊರೊನಾ ಹರಡುವ ಭೀತಿ ಕಳ್ಳರಿಗೆ ಮಾತ್ರ ಇದ್ದಂತಿಲ್ಲ.
ಮುಂಬೈ ಚೆಂಬೂರಿನ ಕೊಳೆಗೇರಿ ಪ್ರದೇಶದಲ್ಲಿ ಓರ್ವ ಮಹಿಳೆಗೆ ಸೋಂಕು ಇರುವುದು ದೃಢವಾಗಿತ್ತು. ಸೋಂಕಿತ ಮಹಿಳೆಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಳೆಗೇರಿ ಪ್ರದೇಶದಲ್ಲಿ ಜಾಗದ ಕೊರತೆ ಇರುವ ಕಾರಣ ಆಕೆಯ ಕುಟುಂಬಸ್ಥರನ್ನು ಬೇರೆಡೆ ಕ್ವಾರಂಟೈನ್ನಲ್ಲಿರಿಸಲಾಗಿದೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡಿರುವ ಖದೀಮನೊಬ್ಬ ಮಹಿಳೆಯ ಮನೆಗೆ ನುಗ್ಗಿ ನಗದು ಹಾಗೂ ಕೆಲ ವಸ್ತುಗಳನ್ನ ಎಗರಿಸಿದ್ದಾನೆ.