ಉಜ್ಜೈನಿ (ಮಧ್ಯ ಪ್ರದೇಶ): ವಿಷಯುಕ್ತ ಮದ್ಯ ಸೇವಿಸಿ ಏಳು ಮಂದಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ ಉಜ್ಜೈನಿ ಜಿಲ್ಲೆಯ ಛತ್ರಿ ಚೌಕ್‌ನ ಗೋಪಾಲ್ ಮಂದಿರ ಪ್ರದೇಶದಲ್ಲಿ ನಡೆದಿದೆ.
ಇಂದು ಬೆಳಗ್ಗೆ ರಸ್ತೆ ಬದಿ ಬಿದ್ದಿದ್ದ ಕಾರ್ಮಿಕರನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತಕ್ಷಣವೇ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇವರಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ವರದಿ ಬಂದ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಲಿದ್ದಾರೆ.