ಬೆಂಗಳೂರು: ರೌಡಿ ಶೀಟರ್ ಸ್ಲಂ ಭರತ್ ಇತ್ತೀಚೆಗೆ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ಆದರೆ ಭರತನ ಅಧಿಪತ್ಯ ಶುರು ಮಾಡಲು ರೌಡಿಗಳು ನಾನು ಮುಂದು ತಾ ಮುಂದು ಎಂದು ಪೈಪೋಟಿಗಿಳಿದಿದ್ದಾರೆ. ಈ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ನಗರದಲ್ಲಿನ 43 ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಸ್ಲಂ ಭರತನನ್ನ ಇತ್ತೀಚೆಗೆ ಉತ್ತರ ವಿಭಾಗ ಪೊಲೀಸರು ಎನ್ಕೌಂಟರ್ ಮಾಡಿದ್ದರು. ಆದರೆ ಭರತ್ ಸಾಮ್ರಾಜ್ಯವನ್ನು ಮತ್ತೆ ಮುಂದುವರೆಸಬೇಕು, ತಾವು ದೊಡ್ಡ ರೌಡಿಗಳು ಆಗಬೇಕೆಂದು ನಾಲ್ಕೈದು ರೌಡಿಗಳು ಪೈಪೋಟಿಗಿಳಿದಿದ್ದಾರೆ. ಈ ವಿಚಾರ ತಿಳಿದ ಪೊಲೀಸರು ಆರೋಪಿಗಳಿಗೆ ಶೋಧ ಮುಂದುವರೆಸಿದ್ದಾರೆ. ಆದರೆ ಇಂದು ಬೆಳಗ್ಗೆ ಗುಂಡೇಟು ತಿಂದು, ತಲೆಮರೆಸಿಕೊಂಡಿರುವ ಸಿದ್ದರಾಜು ಅಪ್ಪಿ ಅಲಿಯಾಸ್ ರಘುವರನ್, ಮಧು ಹೀಗೆ ಹಲವು ಮಂದಿ ಪಾತಕಿಗಳ ಹೆಡೆಮುರಿ ಕಟ್ಟಲು ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.
ರೌಡಿಗಳ ಕಾಲ್ ಲಿಸ್ಟ್ ನೋಡಿ ಬೆಚ್ಚಿಬಿದ್ದ ಪೊಲೀಸರು:
ರೌಡಿ ಭರತ್ ಎನ್ಕೌಂಟರ್ ಮಾಡಿದ ಬಳಿಕ ಹಲವು ರೌಡಿಗಳು ಸೈಲೆಂಟಾದ್ರೆ, ಅವನ ಶಿಷ್ಯಂದಿರು ಎನ್ಕೌಂಟರ್ ಮಾಡಿದ ನಂದಿನಿ ಲೇಔಟ್ ಇನ್ಸ್ಪೆಕ್ಟರ್ ಲೋಹಿತ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೆ ತನಿಖೆಯಲ್ಲಿ ಭಾಗಿಯಾದ ಕೆಲ ಪೇದೆಗಳನ್ನ ಕೊಲೆ ಅಥವಾ ಅವರ ಮೇಲೆ ಹಲ್ಲೆ ಕುರಿತು ಮಾತುಕತೆ ನಡೆಸಿರುವ ವಿಚಾರ ಕಾಲ್ ರೆಕಾರ್ಡ್ ನಿಂದ ತಿಳಿದುಬಂದಿದೆ. ಹೀಗಾಗಿ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿನ ತಂಡ ಅಲರ್ಟ್ ಆಗಿ ರೌಡಿ ಭರತ್ ಸಹಚರರು, ಕುಟುಂಬಸ್ಥರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.