ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳಲ್ಲಿ ಪಿಸ್ತೂಲ್ ಬಳಕೆಯ ಸಂಸ್ಕೃತಿ ಹೆಚ್ಚಾಗುತ್ತಿದೆ. ಕೆಲಸ ನೀಡಿ ಅನ್ನ ಹಾಕಿದ ಧಣಿಯ ಕೊಲೆಗೆ ಸ್ಕೆಚ್ ಹಾಕಿದ ಆರೋಪದಡಿ ರೌಡಿಶೀಟರ್ವೋರ್ವನನ್ನು ಬಾಗಲೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸೈಲೆಂಟ್ ಫಯಾಜ್ ಬಂಧಿತ ಆರೋಪಿ. ಈತನಿಂದ ಒಂದು ಪಿಸ್ತೂಲ್ ಹಾಗೂ ಏಳು ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಕೆಲಸ ಮಾಡುವ ಆವಲಹಳ್ಳಿಯ ವಾಸಿಂ ಎಂಬುವರ ಬಳಿ ರೌಡಿಶೀಟರ್ ಫಯಾಜ್ ಕೆಲಸ ಮಾಡುತ್ತಿದ್ದ. ಸಣ್ಣಪುಟ್ಟ ರಿಯಲ್ ಎಸ್ಟೇಟ್ ದಂಧೆಗಳಲ್ಲಿ ಸೆಂಟ್ಲ್ಮೆಂಟ್ ಮಾಡುತ್ತಿದ್ದ. ಒಮ್ಮೆ ಗುರುವಿಗೆ ತಿಳಿಸದೆ ಸೆಟ್ಲ್ಮೆಂಟ್ ಮಾಡಿ ಹಣ ನೀಡದೆ ಫಯಾಜ್ ವಂಚಿಸಿದ್ದ ಎನ್ನಲಾಗ್ತಿದೆ. ಈ ವಿಷಯ ಗೊತ್ತಾಗಿ ಫಯಾಜ್ ನನ್ನು ಹೀಗೆ ಬಿಟ್ಟರೆ ನನಗೆ ಬೆಲೆ ಇರಲ್ಲ. ಇವನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ವಾಸೀಮ್ ನಿರ್ಧರಿಸಿದ್ದ. ಈ ಈ ವಿಷಯ ತಿಳಿದುಕೊಂಡ ಫಯಾಜ್ ತಮ್ಮ ಮಾಲೀಕನನ್ನು ಮುಗಿಸಲು ಪರಿಚಯಸ್ಥರ ಮೂಲಕ ಮಧ್ಯಪ್ರದೇಶದಿಂದ ಪಿಸ್ತೂಲ್ ಹಾಗೂ ಏಳು ಜೀವಂತ ಗುಂಡುಗಳನ್ನು ತರಿಸಿಕೊಂಡು ಹತ್ಯೆ ಮಾಡಲು ಓಡಾಡುತಿದ್ದ ಎಂದು ತಿಳದುಬಂದಿದೆ.
ಬಾಗಲೂರು ಪೊಲೀಸರ ಗಸ್ತಿನ ವೇಳೆ ಅನುಮಾನಾಸ್ಪದವಾಗಿ ಓಡಾಡ್ತಿದ್ದ ಫಯಾಜ್ನನ್ನು ತಪಾಸಣೆ ನಡೆಸಲು ಮುಂದಾದಾಗ ಆರೋಪಿಯು ಪರಾರಿಯಾಗಲು ಪ್ರಯತ್ನಿಸಿದ್ದ. ಆಗ ಫಯಾಜ್ ನನ್ನು ಹಿಡಿದು ತಪಾಸಣೆಗೆ ಒಳಪಡಿಸಿದಾಗ ಅಕ್ರಮವಾಗಿ ಇಟ್ಟುಕೊಂಡಿದ್ದ ಒಂದು ದೇಶಿ ನಿರ್ಮಿತ ಪಿಸ್ತೂಲ್, ಏಳು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪಿಸ್ತೂಲ್ ಮಾರಿದವರು ಯಾರು ಎಂಬುದರ ಬಗ್ಗೆ ಬಾಗಲೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.