ನವದೆಹಲಿ: ದರೋಡೆಕೋರರನ್ನು ತಡೆಯಲು ಹೋದ ವಿದೇಶಾಂಗ ಸಚಿವಾಲಯದ ನಿವೃತ್ತ ಅಧಿಕಾರಿಯ ಪತ್ನಿಯನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಕೆಲ ವರ್ಷಗಳ ಹಿಂದೆ ತಮ್ಮ ಇಬ್ಬರ ಮಕ್ಕಳು ಮೃತಪಟ್ಟ ಬಳಿಕ 94 ವರ್ಷದ ನಿವೃತ್ತ ಅಧಿಕಾರಿ ಬಿ.ಆರ್.ಚಾವ್ಲಾ ಮತ್ತು ಪತ್ನಿ ಕಾಂತಾ ಚಾವ್ಲಾ (88) ದಕ್ಷಿಣ ದೆಹಲಿಯ ಸಫ್ದರ್ಜಂಗ್ ಎನ್ಕ್ಲೇವ್ನಲ್ಲಿ ವಾಸಿಸುತ್ತಿದ್ದರು. ಇವರ ಮನೆಗೆ ಹೊಸದಾಗಿ ಕೆಲಸಕ್ಕೆ ಸೇರಿದ್ದ ಸೆಕ್ಯುರಿಟಿ ಗಾರ್ಡ್, ಶನಿವಾರ ರಾತ್ರಿ ಮತ್ತಿಬ್ಬರು ಸ್ನೇಹಿತರನ್ನು ಕರೆದುಕೊಂಡು ವೃದ್ಧ ದಂಪತಿಯ ಮನೆಯೊಳಗೆ ದರೋಡೆ ಮಾಡಲು ನುಗ್ಗಿದ್ದಾನೆ. ಇದನ್ನು ತಡೆಯಲು ಹೋದ ಕಾಂತಾ ಚಾವ್ಲಾರಿಗೆ ಇವರಲ್ಲೊಬ್ಬ ಚೂರಿ ಇರಿದು ಹಲ್ಲೆ ಮಾಡಿದ್ದಾನೆ. ಅಲ್ಲದೇ ಮನೆಯಲ್ಲಿದ್ದ ನಗದು, ಆಭರಣಗಳನ್ನೆಲ್ಲಾ ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.
ದಿಕ್ಕು ತೋಚದಂತಾದ ಚಾವ್ಲಾ, ಮನೆಯಿಂದ ಹೊರಹೋಗಿ ನೆರೆಹೊರೆಯವರನ್ನು ಕೂಗಿ ಕರೆದಿದ್ದು, ಅವರ ಸಹಾಯದಿಂದ ಪ್ರಜ್ಞಾಹೀನವಾಗಿ ಬಿದ್ದಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಬದುಕುಳಿಯಲಿಲ್ಲ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.