ಮೈಸೂರು: ಅಪರೂಪದ ಬ್ರೌನ್ ಫಿಶ್ ಗೂಬೆಯನ್ನು ಹಿಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ, ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಮೊಬೈಲ್ ಸ್ಕ್ವಾಡ್ ತಂಡದವರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕುಮಾರ್, ಮೊಹಮ್ಮದ್ ರಫಿ ಮತ್ತು ಮದ್ದೂರಿನ ರಾಜೇಶ್ ಬಂಧಿತ ಆರೋಪಿಗಳಾಗಿದ್ದು, ಅಪರೂಪದ ಬ್ರೌನ್ ಫಿಶ್ ಎಂಬ ಗೂಬೆಯನ್ನು ಹಿಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಮೊಬೈಲ್ ಸ್ಕ್ವಾಡ್ ತಂಡ ಇವರನ್ನು ಬಂಧಿಸಿದ್ದು, ಇವರಿಂದ ಅಪರೂಪದ ಬ್ರೌನ್ ಫಿಶ್ ಗೂಬೆ ಮತ್ತು ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಗೂಬೆಯನ್ನು ಇಟ್ಟುಕೊಂಡರೆ ಅದೃಷ್ಟದ ಸಂಕೇತ ಎಂದು ಜನರನ್ನು ನಂಬಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ.