ಬಳ್ಳಾರಿ: ಪೊಲೀಸ್ ಅಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡ ಜಂಟಿ ಕಾರ್ಯಾಚರಣೆ ನಡೆಸಿ 15 ಬಾಲಕಾರ್ಮಿಕರನ್ನು ರಕ್ಷಿಸಿದೆ.
ನಗರದ ಮುಂಡರಗಿ ಪ್ರದೇಶದ ವಿಜಯ ಹನುಮಾನ್ ಕೋಲ್ಡ್ ಸ್ಟೋರೇಜ್ ಹಾಗೂ ಖಾಜಾ ಗರೀಬ್ ಜಿನ್ನಿಂಗ್‍ನಲ್ಲಿ ದುಡಿಯುತ್ತಿದ್ದ 15 ಬಾಲಕಾರ್ಮಿಕರನ್ನು ತಹಶೀಲ್ದಾರ ಯು.ನಾಗರಾಜ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಚಂದ್ರಶೇಖರ ಐಲಿ ಹಾಗೂ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಡಿವೈಎಸ್ಪಿ ಜಾವೀದ ಇನಾಂದರ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ವಿಜಯ್ ಹನುಮಾನ್ ಕೋಲ್ಡ್ ಸ್ಟೋರೇಜ್ ಕೈಗಾರಿಕೆಯಲ್ಲಿ 7 ಮಕ್ಕಳು ಹಾಗೂ ಖಾಜಾ ಗರೀಬ್‍ನ ಮೆಣಸಿನಕಾಯಿ ಘಟಕದಲ್ಲಿ 5 ಮಕ್ಕಳು ಕೆಲಸ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡ ಜಂಟಿ ಕಾರ್ಯಾಚರಣೆ ನಡೆಸಿದೆ.
ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆಯೇ ಕೈಗಾರಿಕಾ ಘಟಕದ ಮಾಲೀಕರು ನಾಪತ್ತೆಯಾಗಿದ್ದಾರೆ. ಸದ್ಯ ಮಾಲೀಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ರಕ್ಷಣೆ ಮಾಡಿದ ಬಾಲಕಾರ್ಮಿಕರಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸುವಂತೆ ಬಳ್ಳಾರಿ ತಹಶೀಲ್ದಾರ್ ಯು.ನಾಗರಾಜ ಪೋಷಕರಿಗೆ ಸೂಚಿಸಿದ್ದಾರೆ.