ಬೆಂಗಳೂರು: ಸುಲಭವಾಗಿ ಹಣ ಸಂಪಾದನೆಗಾಗಿ ನಕಲಿ ನೋಟುಗಳು ಮುದ್ರಿಸಿ ಚಲಾವಣೆಗೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಈಗಾಗಲೇ ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮತ್ತೊಂದೆಡೆ ಪ್ರಕರಣದ ಮಾಹಿತಿ ಕೋರಿ ಕೇಂದ್ರ ತನಿಖಾ ಸಂಸ್ಥೆಯಾದ ಇಂಟಲಿಜೆನ್ಸ್ ಬ್ಯೂರೋ (ಐಬಿ) ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದು, ಈ ಮೂಲಕ ಪ್ರಕರಣದ ತನಿಖೆಗೆ ಎಂಟ್ರಿ ಕೊಟ್ಟಿದೆ.
ಹೊರಗಿನ ಶಕ್ತಿಗಳು ಪ್ರಕರಣದಲ್ಲಿ ತೊಡಗಿಕೊಂಡಿವೆಯೇ.? ಎಂಬುದರ ಬಗ್ಗೆ ಐಬಿ ಪ್ರಾಥಮಿಕ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಯಾರಿಗೂ ತಿಳಿಯದ ರೀತಿಯಲ್ಲಿ ಖೋಟಾನೋಟು ಮುದ್ರಣ ನಡೆಯುತ್ತಿದ್ದ ವಿಚಾರ ಗೊತ್ತಾಗಿದೆ. ಬಂಧನಕ್ಕೆ ಒಳಗಾಗಿ 12 ದಿನಗಳ ಪೊಲೀಸ್ ವಶದಲ್ಲಿರುವ ಮೂವರು ಆರೋಪಿಗಳ ಹಿಂದೆ ಪ್ರಭಾವಿಗಳ ಕೈವಾಡವಿದೆಯಾ? ಎಂಬುದರ ಬಗ್ಗೆಯೂ ಮತ್ತೊಂದು ಆಯಾಮದಲ್ಲಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ: ಪಾದರಾಯನಪುರ ನಿವಾಸಿ ಬಂಧನ
ನಕಲಿ ನೋಟು ಚಲಾವಣೆಗೆ ಮಾಡಿದವರಿಗೆ ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ನೀಡಲಾಗುತ್ತಿತ್ತು. ಚಲಾವಣೆ ಮಾಡಿದ ಹಣದ ಶೇ.10ರಷ್ಟು ಹಣ ಸಂದಾಯವಾಗುತ್ತಿದ್ದು, ಆದರೆ ಯಾರು ಹಣವನ್ನು ಸಂದಾಯ ಮಾಡುತ್ತಿದ್ದರು? ಹೇಗೆ ಮಾಡುತ್ತಿದ್ದರು? ಎಂಬುದರ ಬಗ್ಗೆ ಆರೋಪಿಗಳ ಇನ್ನಷ್ಟೇ ಬಾಯಿ ಬಿಡಬೇಕಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ..
ಪಾದರಾಯನಪುರದ ಶಾಮಣ್ಣಗಾರ್ಡನ್ ನಿವಾಸಿಗಳಾದ ಮೊಹಮ್ಮದ್ ಇಮ್ರಾನ್, ಜಮಾಲ್ ಅಕ್ತರ್ ಹಾಗೂ ಗಂಗೊಂಡನಹಳ್ಳಿಯ ಮುಬಾರಕ್ ಎಂಬುವರನ್ನು ಡಿ.26ರಂದು ಬಂಧಿಸಿದ್ದರು. ಇವರಿಂದ 100 ರೂಪಾಯಿ ಮುಖಬೆಲೆಯ 198 ನೋಟುಗಳು, 2 ಪ್ರಿಂಟಿಂಗ್ ಸ್ಕ್ರೀನ್ಗಳು, ಒಂದು ಕಂಪ್ಯೂಟರ್ ಕೀ ಪ್ಯಾಡ್, ಹೆಚ್ಸಿಎಲ್ ಕಂಪನಿಯ ಸಿಪಿಯು, ವಿವಿಧ ಬಣ್ಣದ ಇಂಕ್ ಡಬ್ಬಗಳು, 500 ಹಾಗೂ 200 ಮುಖಬೆಲೆಯ ಸ್ಕ್ರೀನ್ ಹಾಳೆಗಳು, ಪೆನ್ ಡ್ರೈವ್ ಸೇರಿದಂತೆ ವಿವಿಧ ರೀತಿಯ ಉಪಕರಣಗಳನ್ನು ಜಪ್ತಿ ಮಾಡಿಕೊಂಡಿದ್ದರು.
ಆರೋಪಿಯಾದ ಜಮಾಲ್ ಆಟೋ ಹತ್ತಿ ಶಾಂತಿನಗರದಲ್ಲಿ ಇಳಿದು 50 ರೂಪಾಯಿ ನೀಡುವ ಬದಲು 100 ರೂಪಾಯಿ ನೀಡಿದ್ದಾನೆ. ಹಣ ಪಡೆದ ಚಾಲಕ ಮಂಜುನಾಥ್ ಖೋಟಾನೋಟು ಎಂದು ಮನದಲ್ಲಿ ಖಾತ್ರಿಪಡಿಸಿಕೊಂಡು ಚಿಲ್ಲರೆ ಹಣ ನೀಡುವುದಾಗಿ ಹೇಳಿ ನೇರವಾಗಿ ವಿಲ್ಸನ್ ಗಾರ್ಡನ್ ಠಾಣೆಗೆ ಕರೆದುಕೊಂಡು ಬಂದಿದ್ದ. ಈ ವೇಳೆ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಹಲವು ವರ್ಷಗಳಿಂದ ಪಾದರಾಯನಪುರ ಶಾಮಣ್ಣ ಗಾರ್ಡನ್ನಲ್ಲಿರುವ ಇಮ್ರಾನ್ ಮನೆಯಲ್ಲಿ ಖೋಟಾನೋಟು ಮುದ್ರಣವಾಗುತಿತ್ತು. ಸ್ಕ್ರೀನ್ ಪ್ರಿಂಟಿಂಗ್ ಕೆಲಸ ಅನುಭವ ಹೊಂದಿದ್ದ ಎರಡನೇ ಆರೋಪಿ ಮುಬಾರಕ್ ಸಹಾಯದಿಂದ ಅಸಲಿ ನೋಟುಗಳಂತೆ ಕಾಣುವ ಹಾಗೇ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದರು. ಪ್ರಕರಣದ ಮೂರನೇ ಆರೋಪಿಯಾದ ಜಮಾಲ್ ನಕಲಿ ನೋಟುಗಳ ಚಲಾವಣೆ ಜವಾಬ್ದಾರಿ ಹೊತ್ತುಕೊಂಡಿದ್ದ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿತ್ತು.