ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜಧಾನಿಯಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ಕಾಟನ್ ಪೇಟೆ ಬಳಿ ಹಳೆ ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಕಿಡ್ನ್ಯಾಪ್ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಎಂಬುವನ ಕಾಲಿಗೆ ಪಶ್ಚಿಮ ವಿಭಾಗದ ಪೊಲೀಸರು ಗುಂಡು ಹಾರಿಸಿದ್ದಾರೆ.
ರಾಕೇಶ್ ಶರ್ಮಾ ಹಾಗೂ ಗೋಪಾಲ್ ಸಿಂಗ್ ಎಂಬುವರನ್ನು ಕಿಡ್ನ್ಯಾಪ್ ಮಾಡಿದ್ದ ಮನ್ಸೂರ್, 5 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದನಂತೆ. ಈ ಬಗ್ಗೆ ಸುದ್ದಿ ತಿಳಿದು ಬಂಧಿಸಲು ತೆರಳಿದ್ದ ಪೊಲೀಸ್ ಕಾನ್ಸ್ಟೇಬಲ್ ಜಯಚಂದ್ರ ಹಾಗೂ ಪಿಎಸ್ಐ ರಾಜೇಂದ್ರ ಮೇಲೆ ಹಲ್ಲೆಗೆ ಮುಂದಾಗಿದ್ದ ಎನ್ನಲಾಗುತ್ತಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿಯ ಮೇಲೆ ಗುಂಡು ಹಾರಿಸುವ ಮೂಲಕ 8ಕ್ಕೂ ಅಧಿಕ ಹಳೆ ರಾಬರಿ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಮನ್ಸೂರ್ನನ್ನ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ರಾಕೇಶ್ ಶರ್ಮಾ ಹಾಗೂ ಆತನ ಸ್ನೇಹಿತ ರಾಜಸ್ಥಾನ ಮೂಲದ ಗೋಪಾಲ್ ಸಿಂಗ್ನನ್ನ ಅಪಹರಿಸಿದ್ದ ಆರೋಪಿ ಮನ್ಸೂರ್ ಆ್ಯಂಡ್ ಗ್ಯಾಂಗ್, ನೇಪಾಳದಲ್ಲಿದ್ದ ರಾಕೇಶ್ ಸಹೋದರನಿಗೆ ಕರೆ ಮಾಡಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ. ತಕ್ಷಣ ರಾಕೇಶ್ ಸಹೋದರ ಬೆಂಗಳೂರಿನಲ್ಲೇ ವಾಸವಿದ್ದ ಸ್ನೇಹಿತ ಥಾಗ್ ಬಹದ್ದೂರ್ ಥಾಪಾಗೆ ಕರೆ ಮಾಡಿ ವಿಷಯ ತಿಳಿಸಿದ್ದಿಂದ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನು ಕೃತ್ಯದಲ್ಲಿ ಏಳು ಜನ ಭಾಗಿಯಾಗಿರುವ ಶಂಕೆ ಇದ್ದು ಸದ್ಯ ಮನ್ಸೂರ್ ಖಾನ್ ಹಾಗೂ ಆತನ ಇನ್ನೊಬ್ಬ ಸಹಚರ ಅಬ್ದುಲ್ ಮಜೀದ್ನನ್ನ ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಮಾಹಿತಿ ನೀಡಿದ್ದಾರೆ.