ಮಂಗಳೂರು: ಕಪ್ಪೆಚಿಪ್ಪು ಹೆಕ್ಕಲು ಹೋದ ಯುವ ಛಾಯಾಗ್ರಾಹಕನೋರ್ವ ನಗರದ ಮರವೂರು ಬಳಿಯ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ನಗರದ ಕಾವೂರುನಲ್ಲಿರುವ ದಿಯಾ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಯುವ ಛಾಯಾಗ್ರಾಹಕ ಕೌಶಿಕ್ (22) ಮೃತಪಟ್ಟ ಯುವಕ. ಕಾವೂರು ಪಳನೀರ್ ಕಟ್ಟೆ ನಿವಾಸಿಯಾಗಿದ್ದ ಕೌಶಿಕ್ ತಾಯಿಯೊಂದಿಗೆ ವಾಸವಿದ್ದ. ಒಬ್ಬನೇ ಮಗನಾಗಿದ್ದ ಈತನ ಸಾವಿನಿಂದ ಈ ಕುಟುಂಬ ತನ್ನ ಆಧಾರ ಸ್ತಂಭವನ್ನೇ ಕಳೆದುಕೊಂಡಂತಾಗಿದೆ.
ನಾಲ್ವರು ಗೆಳೆಯರೊಂದಿಗೆ ಮರವೂರಿಗೆ ಕಪ್ಪೆಚಿಪ್ಪು ಹೆಕ್ಕಲು ಹೋಗಿದ್ದ ಸಂದರ್ಭ ನದಿಯಲ್ಲಿ ಮುಳುಗಿದ್ದಾನೆ. ಜತೆಗಿದ್ದವರು ಬೊಬ್ಬೆ ಹಾಕಿದಾಗ ಸ್ಥಳೀಯರೊಬ್ಬರು ಬಂದು ರಕ್ಷಣೆಗೆ ಪ್ರಯತ್ನಿಸಿದ್ದರೂ ಯುವಕನನ್ನು ನೀರಿನಿಂದ ಮೇಲೆತ್ತಲು ಸಾಧ್ಯವಾಗಿಲ್ಲ. ಬಳಿಕ ಸತತ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.