ಬೆಂಗಳೂರು: ಹೊರ ರಾಜ್ಯ ಹಾಗು ವಿದೇಶದಿಂದ ಸಿಲಿಕಾನ್ ಸಿಟಿಗೆ ಬಂದರನ್ನು ಆರೋಗ್ಯ ಅಧಿಕಾರಿಗಳು ನಗರದ ಕೆಲ ಹೋಟೆಲ್ಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಇಂಥ ಕ್ವಾರಂಟೈನಿಗಳನ್ನು ಬಂಧಮುಕ್ತಗೊಳಿಸುವುದಾಗಿ ಪುಸಲಾಯಿಸಿ ಹಣ ಪೀಕಲು ಯತ್ನಿಸಿದ ವ್ಯಕ್ತಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣೇಗೌಡ ಬಂಧಿತ ಆರೋಪಿ. ಈತ ಬಹಳಷ್ಟು ಮಂದಿಗೆ ಕ್ವಾರಂಟೈನ್ ಮಾಡದಂತೆ ನೋಡಿಕೊಳ್ಳುತ್ತೇನೆ ಎಂದು ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಒಂದು ನಿರ್ದಿಷ್ಟ ಹೋಟೆಲ್ ಮಾಲೀಕರಿಗೆ ಈತ ಪರಿಚಿತ ಎಂದೂ ಹೇಳಲಾಗುತ್ತಿದೆ.
ಹೀಗಾಗಿ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದು, ಈತ ಯಾರನ್ನೆಲ್ಲಾ ಕ್ವಾರಂಟೈನ್ ಮಾಡಿಸದೆ ಸುಲಭವಾಗಿ ಬಿಟ್ಟು ಕಳುಹಿಸಿದ್ದ ಎನ್ನುವುದರ ಕುರಿತು ತನಿಖೆ ಮುಂದುವರೆದಿದೆ. ಇದೇ 16 ರಂದು ದೆಹಲಿಯಿಂದ ಬಂದಿರುವ 70 ಪ್ರಯಾಣಿಕರನ್ನು ಗಾಂಧಿನಗರದ ದೀವಾ ಹೋಟೆಲ್ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು.
25 ಸಾವಿರ ಕೊಡಿ ಸಾಕು: ಮೇ 18 ರಂದು ಹೋಟೆಲ್‌ಗೆ ಕೃಷ್ಣೇಗೌಡ ಹೋಗಿ ಕ್ವಾರಂಟೈನ್‌ನಲ್ಲಿದ್ದ ಮೂವರನ್ನು ಪರಿಚಯ ಮಾಡಿಕೊಂಡು ಕ್ವಾರಂಟೈನ್‌ಗಾಗಿ ಆಗುತ್ತಿರುವ ಖರ್ಚಿನ ಬಗ್ಗೆ ವಿಚಾರಿಸಿದ್ದ. ಅದಕ್ಕೆ ಪ್ರತಿಕ್ರಿಯಿಸಿದ್ದ ಕ್ವಾರಂಟೈನ್‌ನಲ್ಲಿದ್ದವರು, ದಿನಕ್ಕೆ 1,400 ರೂ. ಬಾಡಿಗೆಯಂತೆ 19,600 ರೂ. ಪಾವತಿಸಬೇಕು. ವೈದ್ಯಕೀಯ ಪರೀಕ್ಷೆಗೆ 8 ಸಾವಿರ ರೂ. ಕೊಡಬೇಕು ಎಂದಿದ್ದರು.
ಈ ವೇಳೆ ಆರೋಪಿ 25 ಸಾವಿರ ನನಗೆ ಕೊಟ್ಟರೆ ವೈದ್ಯಕೀಯ ಪರೀಕ್ಷೆ ಬಳಿಕ ಯಾವುದೇ ಕ್ವಾರಂಟೈನ್ ಇಲ್ಲದೆ ಮನೆಗೆ ಕಳಿಸುತ್ತೇನೆ ಎಂದು ಆಮಿಷವೊಡ್ಡಿದ್ದಾನೆ. ಇದರಿಂದ ಅನುಮಾನ ಬಂದು ಕ್ವಾರಂಟೈನ್‌ನಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಎಚ್ಚೆತ್ತ ಆರಕ್ಷಕರು ಆರೋಪಿಯನ್ನು ಬಂಧಿಸಿದ್ದರು.