ಬರ್ಲಿನ್ (ಜರ್ಮನಿ): ಪಶ್ಚಿಮ ಜರ್ಮನಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಐದು ಮಕ್ಕಳ ಮತದೇಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಹೆತ್ತ ತಾಯಿಯೇ ತನ್ನ ಐವರು ಮಕ್ಕಳನ್ನು ಹತ್ಯೆ ಮಾಡಿದ್ದಾಳೆ. ಆ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದಿವೆ.
ನಾರ್ತ್ ರೈನ್-ವೆಸ್ಟ್ಫಾಲಿಯಾ ರಾಜ್ಯದ ಸೊಲಿಂಗೆನ್ ನಗರದ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಮೃತ ಮಕ್ಕಳ ದೇಹ ಪತ್ತೆಯಾಗಿವೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದೆ ಪೊಲೀಸರು ಸುದ್ದಿ ಏಜೆನ್ಸಿ ಎಎಫ್ಪಿಗೆ ಮಾಹಿತಿ ನೀಡಿದ್ದಾರೆ.
ಮೃತ ಮಕ್ಕಳ ವಯಸ್ಸು 1, 2, 3, 6 ಮತ್ತು 8 ವರ್ಷ ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಬಳಿಕ, ಆಕೆ ಆತ್ಮಹತ್ಯೆಗೆ ಯತ್ನಿಸಿ ರೈಲು ಹಳಿ ಮೇಲೆ ಬಿದ್ದಿದ್ದಳು. ತೀವ್ರವಾಗಿ ಗಾಯಗೊಂಡಿದ್ದವಳನ್ನು ಪೊಲೀಸರು ರಕ್ಷಿಸಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳ ಅಜ್ಜಿ ಪೊಲೀಸರಿಗೆ ತನ್ನ ಮಗಳ ಕೃತ್ಯದ ಬಗ್ಗೆ ಮಾಹಿತಿ ನೀಡಿ, ಆಕೆಯೇ ಐದು ಮಕ್ಕಳನ್ನು ಕೊಂದಿದ್ದಾಳೆ. ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದೊಂದಿಗೆ ಮತ್ತೊಂದು ಮಗುವಿನೊಂದಿಗೆ ಹೋಗಿದ್ದಾಳೆ ಎಂಬುದು ವರದಿಯಾಗಿದೆ.
ಅಜ್ಜಿಯ ಹೇಳಿಕೆಯ ಬಳಿಕ 11 ವರ್ಷದ ಮಗ ಪತ್ತೆಯಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂಬುದು ತಿಳಿದುಬಂದಿದೆ.
ಹತ್ಯೆಗೈದ ತಾಯಿ ಆ ಬಳಿಕ ಸುಮಾರು 35 ಕಿ.ಮೀ. ದೂರದಲ್ಲಿರುವ ಡುಯೆಸೆಲ್ಡಾರ್ಫ್‌ನ ಮುಖ್ಯ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದಳು. ಅಲ್ಲಿ ಅವಳು ರೈಲಿನ ಮುಂದೆ ಹಾರಿದ್ದು, ಪ್ರಾಣಾಪಾಯದಿಂದ ಪಾರಾಗಿ ತೀವ್ರವಾಗಿ ಗಾಯಗೊಂಡಿದ್ದಾಳೆ. ಈ ಬಳಿಕ ಆಕೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಮಕ್ಕಳ ಹತ್ಯೆಗೆ ಕಾರಣವೇನು ಎಂಬುದು ತಿಳಿದುಬರಬೇಕಿದೆ.