ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣ ಸಂಬಂಧ ಈವರೆಗೆ 18ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಮಾಹಿತಿ ನೀಡಿದೆ.
ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಹಾಗೂ ದೀಪಿಕಾ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಶನಿವಾರ ಧರ್ಮ ಪ್ರೊಡಕ್ಷನ್ಸ್ ಕಾರ್ಯನಿರ್ವಾಹಕ ನಿರ್ಮಾಪಕ ಕ್ಷಿತಿಜ್ ರವಿ ಪ್ರಸಾದ್ರನ್ನು ಅರೆಸ್ಟ್ ಮಾಡಲಾಗಿದ್ದು, ಈವರೆಗೆ 18ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಹೊಸದಾಗಿ ಯಾರಿಗೂ ಸಮನ್ಸ್ ಜಾರಿಗೊಳಿಸಿಲ್ಲ ಎಂದು ನೈರುತ್ಯ ವಲಯದ ಎನ್‌ಸಿಬಿ ಉಪ ಮಹಾನಿರ್ದೇಶಕ ಮುತಾ ಅಶೋಕ್ ಜೈನ್ ತಿಳಿಸಿದ್ದಾರೆ.
ಜೂನ್ 14ರಂದು ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದ್ದು, ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಅರೆಸ್ಟ್ ಆಗಿರುವ ನಟಿ ರಿಯಾ ಚಕ್ರವರ್ತಿ ಸೇರಿದಂತೆ ಇತರ ಆರೋಪಿಗಳು ನೀಡಿದ ಹೇಳಿಕೆ ಮೇರೆಗೆ ಬಾಲಿವುಡ್ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಷನ್ ಡಿಸೈನರ್ ಸಿಮೋನೆ ಖಂಬಟ್ಟಾರನ್ನು ಸಿಸಿಬಿ ವಿಚಾರಣೆಗೊಳಪಡಿಸಿದೆ.