ಉತ್ತರ ಪ್ರದೇಶ: ಕಬ್ಬಿನ ಬೆಳೆಯನ್ನು ಎಮ್ಮೆ ನಾಶ ಮಾಡಿತು ಎಂದು 15 ವರ್ಷದ ಬಾಲಕನನ್ನು ಮೂವರು ವ್ಯಕ್ತಿಗಳು ಥಳಿಸಿದ ಪರಿಣಾಮ ಬಾಲಕ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ.
ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿರುವ ಮೃತ ಬಾಲಕನ ಕುಟುಂಬದ ಸದಸ್ಯರು, ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತನ್ವೀರ್ ಖಾನ್ ನೇತೃತ್ವದಲ್ಲಿ ಶಹಜಹಾನ್ಪುರ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಹಿನ್ನೆಲೆ: ಶನಿವಾರ ಸಂಜೆ ಬಾಲಕ ಕುಲ್ದೀಪ್ ಯಾದವ್ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಅವನ ಎಮ್ಮೆಯು ಅಲ್ಲೇ ಸಮೀಪದಲ್ಲಿದ್ದ ಧರ್ಮೇಂದ್ರ ಸಿಂಗ್ ಹಾಗೂ ಸಾಧು ಸಿಂಗ್ ಎಂಬ ಸಹೋದರರ ಹೊಲಕ್ಕೆ ನುಗ್ಗಿದೆ. ಎಮ್ಮೆಯನ್ನು ಹಿಡಿದು ಕಟ್ಟಿ ಹಾಕಿದ ಸಹೋದರರು ಬಾಲಕನಿಗೆ ಹಿಂದಿರುಗಿಸಲು ನಿರಾಕರಿಸಿದ್ದಾರೆ. ಈ ವೇಳೆ, ಜಗಳ ನಡೆದಿದ್ದು, ಧರ್ಮೇಂದ್ರ ಸಿಂಗ್ರ ಮಗ ಭೂಪೇಂದರ್ ಕೂಡ ಇವರೊಂದಿಗೆ ಸೇರಿಕೊಂಡಿದ್ದಾನೆ. ಅಲ್ಲದೇ ಮೂವರು ಸೇರಿ ಕೋಲಿನಲ್ಲಿ ಕುಲ್ದೀಪ್ ಪ್ರಜ್ಞಾಹೀನವಾಗಿ ಬೀಳುವವರೆಗೂ ಹೊಡೆದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದ ಕುಲ್ದೀಪ್ನ ತಂದೆ ಮಹೇಶ್ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಹುಡುಗ ಭಾನುವಾರ ಸಾವನ್ನಪ್ಪಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದು ತಾಯಿ ಕೂಡ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸುತ್ತೇವೆ. ಚುನಾವಣೆಗೆ ಸಂಬಂಧಿಸಿದ ಜಗಳವೇ ಕೊಲೆಯ ಹಿಂದಿನ ಉದ್ದೇಶವಾಗಿರಬಹುದು ಎಂದು ಎಸ್ಹೆಚ್ಒ ಜಗ್ ನರೇನ್ ಪಾಂಡೆ ಹೇಳಿದ್ದಾರೆ.