ಉತ್ತರ ಪ್ರದೇಶ: ಪ್ರೇಯಸಿಯ ಕುಟುಂಬಸ್ಥರು ಥಳಿಸಿದ ಹಿನ್ನೆಲೆ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶ ಅಜಮ್‌ಗರ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಮನಿಷ್ ರಾಮ್ (25) ಮೃತ ದಲಿತ ಯುವಕ. ಮನಿಷ್ ತನ್ನ ಗ್ರಾಮದ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇವರಿಬ್ಬರ ಸಂಬಂಧಕ್ಕೆ ಬಾಲಕಿಯರ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಆಕೆಯಿಂದ ದೂರವಿರಿಸಲು ಮನಿಷ್ ಪೋಷಕರು ಮಗನನ್ನು ಮುಂಬೈಗೆ ಕಳುಹಿಸಿದ್ದರು. ಕಳೆದ ತಿಂಗಳ ಹಿಂದೆ ಗ್ರಾಮಕ್ಕೆ ಹಿಂದಿರುಗಿದ್ದ ಮನಿಷ್ ಮತ್ತೆ ಬಾಲಕಿಯನ್ನು ಭೇಟಿಯಾಗಲು ಪ್ರಾರಂಭಿಸಿದ್ದಾನೆ.
ಮಂಗಳವಾರ ತಡರಾತ್ರಿ ಮತ್ತೆ ಭೇಟಿ ಮಾಡಲು ಬಂದಾಗ, ಬಾಲಕಿಯ ಪೋಷಕರು ಆತನನ್ನು ಹಿಡಿದು, ಕೈ-ಕಾಲು ಕಟ್ಟಿ ಹಾಕಿ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಈ ವಿಚಾರ ತಿಳಿದ ಮನಿಷ್ ಪೋಷಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮನಿಷ್ನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಬದುಕುಳಿಯಲಿಲ್ಲ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಾಲಕಿಯನ್ನೂ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿರುವುದಾಗಿ ಅಜಮ್‌ಗರ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ಸಿಂಗ್ ತಿಳಿಸಿದ್ದಾರೆ.