ಗದಗ : ಅನೈತಿಕ ಸಂಬಂಧದ ಆರೋಪದ ಮೇಲೆ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ನಿನ್ನೆ ಜಿಲ್ಲೆಯ ಹಿರೇಹಂದಿಗೋಳ ಗ್ರಾಮದಲ್ಲಿ ನಡೆದಿದೆ. ಯುವಕನನ್ನು ತಡರಾತ್ರಿ ಮನೆಯಿಂದ ಎಳೆತಂದು ಕೊಲೆ ಮಾಡಿ, ರೈಲ್ವೆ ಹಳಿಗೆ ಹಾಕಿದ್ದು, ದೇಹ ಎರಡು ತುಂಡಾಗಿದೆ.
28 ವರ್ಷದ ಬಸವರಾಜ್ ಗೌಡನಾಯ್ಕರ ಎಂಬಾತ ಕೊಲೆಗೀಡಾಗಿರುವ ಯುವಕ. ಪಂಚಪ್ಪ ಬಾರಕೇರ್, ರವಿ ಬಾರಕೇರ್ ಹಾಗೂ ಮತ್ತೋರ್ವ ಸಹೋದರ ಒಟ್ಟಾಗಿ ಈ ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ.
ಬಸವರಾಜನಿಗೆ ಸಲುಗೆ ಕೊಟ್ಟು ಮನೆಗೆ ಕರೆದಿದ್ದಕ್ಕೆ, ಸ್ನೇಹಿತನ ಹೆಂಡತಿ ಜೊತೆಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಎನ್ನಲಾಗ್ತಿದೆ. ನಂತರ ಈ ವಿಷಯ ಮನೆಯವರಿಗೆಲ್ಲಾ ಗೊತ್ತಾಗಿ ಬಸವರಾಜನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಂಚಪ್ಪ ಮತ್ತು ರವಿ ಎಂಬ ಇಬ್ಬರು ಆರೋಪಿಗಳು ಸಿಕ್ಕಿದ್ದು, ಮತ್ತೋರ್ವ ಆರೋಪಿ ತಲೆಮರಿಸಿಕೊಂಡಿದ್ದಾನೆ. ಆರೋಪಿಗಾಗಿ ಗದಗ ಗ್ರಾಮೀಣ ಪೊಲೀಸರು ಬಲೆಬೀಸಿದ್ದಾರೆ.