ರಾಯಚೂರು: ಶಂಕಿತ ನಕ್ಸಲ್ ಆರೋಪದ ಮೇಲೆ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿಯನ್ನು ನಿರ್ದೋಷಿ ಎಂದು ಪರಿಗಣಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
1994ರಲ್ಲಿ ಸುದರ್ಶನರೆಡ್ಡಿ ಅವರ ಹತ್ಯೆಗೆ ಸಂಚು, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, 1995ರಲ್ಲಿ ಸರ್ಕಾರದ ವಿರುದ್ಧ ಸಭೆ ನಡೆಸಿ, ರಾಜದ್ರೋಹ ಕೇಸ್ ಸೇರಿದಂತೆ ನಾಲ್ಕು ಪ್ರಕರಣದಲ್ಲಿ ನರಸಿಂಹಮೂರ್ತಿ ಆರೋಪಿಯೆಂದು ದೂರು ದಾಖಲಾಗಿದ್ದವು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಗರದ ಮನೋರಂಜನಾ ಕೇಂದ್ರದಲ್ಲಿ ಗೌರಿ ಟ್ರಸ್ಟ್ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ನರಸಿಂಹಮೂರ್ತಿಯನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಇದೀಗ ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುಸ್ತಫಾ ಅವರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪ ಮುಕ್ತಗೊಳಿಸಿ ಆದೇಶಿಸಿದ್ದಾರೆ.