ಬೆಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ವ್ಯಕ್ತಿಯೊಬ್ಬನನ್ನು ವೈಟ್ ಫೀಲ್ಡ್ ವಿಭಾಗದ ವರ್ತೂರು ಪೊಲೀಸರು ಬಂಧಿಸಿದ್ದಾರೆ.
ಬಾಲಸೋರ್ ಜಿಲ್ಲೆ, ಒಡಿಶಾ ರಾಜ್ಯದ ಸೌದೆ ಗ್ರಾಮ ನಿವಾಸಿ ಶಿವಾನಿ ಶಂಕರ್ ಅಲಿಯಾಸ್ ರಾಜೇಂದ್ರ ಮಲ್ಲಿಕ್ ಬಂಧಿತ ಆರೋಪಿ. ಈತನಿಂದ ಸುಮಾರು 10 ಲಕ್ಷ ರೂ. ಮೌಲ್ಯದ 16 ಕೆಜಿಯಷ್ಟು ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ವರ್ತೂರು ಸಮೀಪದ ಬಳಗೆರೆ ರಸ್ತೆಯ ಶೋಭಾ ಅಪಾರ್ಟ್ಮೆಂಟ್ ಬಳಿ ಸಾರ್ವಜನಿಕರಿಗೆ ಮಾದಕ ವಸ್ತುವನ್ನು ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದ ಮಾಹಿತಿ ಪೊಲೀಸರಿಗೆ ಲಭಿಸಿತ್ತು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಒಡಿಶಾದಲ್ಲಿ ಖರೀದಿಸಿ ರೈಲಿನ ಮುಖಾಂತರ ಬೆಂಗಳೂರಿಗೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ಹೇಳಿದ್ದಾನೆ.
ಸದ್ಯ ಆರೋಪಿಯ ವಿರುದ್ದ 156/2020 ಕಲಂ 20 (ಬಿ) ಎನ್‌ಡಿಪಿಎಸ್ ಆಕ್ಟ್ ಪ್ರಕರಣ ದಾಖಲು ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.