ಕರ್ನೂಲ್: ನಾಲ್ವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ, ಒಂದು ಕೂಡ ಗಂಡು ಮಗು ಇಲ್ಲ ಎಂದು ಪತಿಯು ಪತ್ನಿಯ ಕತ್ತು ಸೀಳಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಕರ್ನೂಲ್ ಜಿಲ್ಲೆಯ ನಂದ್ಯಾಲ ನಿವಾಸಿ ಲಲಿತಾ ಒಂಬತ್ತು ವರ್ಷಗಳ ಹಿಂದೆ ಬಲರಾಜು ಎಂಬಾತನನ್ನು ಮದುವೆಯಾಗಿದ್ದರು. ಈ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗುವನ್ನು ಹೆತ್ತು ಕೊಟ್ಟಿಲ್ಲ ಎಂಬ ಕಾರಣಕ್ಕೆ ಬಲರಾಜು ಪ್ರತಿನಿತ್ಯ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದನಂತೆ. ಅಲ್ಲದೇ ಬೇರೊಂದು ಮದುವೆಯಾಗುವುದಾಗಿ ಹೇಳಿ ಲಲಿತಾಗೆ ಕಿರುಕುಳ ನೀಡುತ್ತಿದ್ದ.
ಜಗಳ ಇದೀಗ ತಾರಕಕ್ಕೇರಿದ್ದು, ತಾಳ್ಮೆ ಕಳೆದುಕೊಂಡ ಬಲರಾಜ್ ಹೆಂಡತಿಯ ಕುತ್ತಿಗೆ ಸೀಳಿ ಕೊಲ್ಲಲು ಹಾಗೂ ತಾನೂ ಕೂಡ ಸಾಯಲು ಯತ್ನಿಸಿದ್ದಾನೆ. ಗಾಯಗೊಂಡಿರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.