ಹಾಸನ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಎಸ್ಪಿ ರಾಮನಿವಾಸ್ ಸಪೆಟ್ ಅವರು, ಕಳೆದ ತಿಂಗಳ 24ರಂದು ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಸತೀಶ್ ಎಂಬಾತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಹೊಳೆನರಸೀಪುರ ಹಾಗೂ ಚನ್ನರಾಯಪಟ್ಟಣದಲ್ಲಿ 8 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತರಿಂದ 184ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 8,74,000 ರೂ. ಎಂದು ಹೇಳಿದ್ದಾರೆ.
ಇನ್ನೊಂದೆಡೆ ಖೋಟಾ ನೋಟು ಚಲಾವಣೆ ಮಾಡುವ ಗ್ಯಾಂಗ್‌ವೊಂದನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪುತ್ತೂರು ತಾಲೂಕಿನ ಇಲಿಯಾಜ್ ಹಾಗೂ ಸುಲೈಮಾನ್, ಮೈಸೂರು ಜಿಲ್ಲೆ ಕೆ. ಆರ್. ನಗರ ತಾಲೂಕಿನ ಕಿರಣ್, ಹೊಳೆನರಸೀಪುರದ ಸಂತೋಷ್ ಬಂಧಿತ ಆರೋಪಿಗಳು.
ಮಾರನಹಳ್ಳಿಯ ಹೋಟೆಲ್ ಸೇರಿದಂತೆ ವಿವಿಧೆಡೆ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದರೆಂದು ತಿಳಿದು ಬಂದಿದೆ. ಗ್ರಾಮಾಂತರ ಠಾಣೆ ಪಿಎಸ್‌ಐ ಬ್ಯಾಟರಾಯನ ಗೌಡ ನೇತೃತ್ವದಲ್ಲಿ ಪ್ರಕರಣದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದರು.