ಮಧುರೈ (ತಮಿಳುನಾಡು): 16 ವರ್ಷದ ಬಾಲಕಿವೋರ್ವಳು ಕಳೆದ ಐದು ವರ್ಷಗಳಿಂದ ಬಲವಂತವಾಗಿ ವೇಶ್ಯಾವಾಟಿಕೆಗೆ ಒಳಗಾಗಿದ್ದು, ಇಲ್ಲಿಯವರೆಗೆ 600 ಜನರು ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ತಮಿಳುನಾಡಿನ ಮಧುರೈನಲ್ಲಿ ವರದಿಯಾಗಿದೆ. ಇದೀಗ ಬಾಲಕಿಯನ್ನು ನಿನ್ನೆ ತಮಿಳುನಾಡು ಪೊಲೀಸರು ರಕ್ಷಿಸಿದ್ದು, ಐವರು ಮಹಿಳೆಯರು ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಂತ್ರಸ್ತೆಯು ಮಧುರೈ ಜಿಲ್ಲೆಯ ಗೋರಿಪಾಲಯಂ ಮೂಲದವಳಾಗಿದ್ದು, 2015 ರಲ್ಲಿ ಹೆತ್ತವರನ್ನು ಕಳೆದುಕೊಂಡಿದ್ದಳು. ಬಳಿಕ ಆಕೆಯನ್ನು ನೋಡಿಕೊಳ್ಳುತ್ತಿದ್ದ ಸಂಬಂಧಿಕರು ಬಲವಂತವಾಗಿ ಆಕೆಯನ್ನು ವೇಶ್ಯಾವಾಟಿಕೆಗೆ ನೂಕಿದ್ದರು. ವೇಶ್ಯೆಯಾಗಿದ್ದ ಬಾಲಕಿಯ ಚಿಕ್ಕಮ್ಮನೇ ಆಕೆಯ ಪಾಲಿಗೆ ಮುಳ್ಳಾಗಿದ್ದಳು. ಐದು ವರ್ಷಗಳಲ್ಲಿ ಸುಮಾರು 600 ಜನರು ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ: ವಿದೇಶಿ ಯುವತಿಯರ ರಕ್ಷಣೆ
ನಿಖರ ಮಾಹಿತಿ ಮೇರೆಗೆ ಕಳ್ಳಸಾಗಣೆ-ವೇಶ್ಯಾವಾಟಿಕೆ ವಿರೋಧಿ ಘಟಕದ ಇನ್ಸ್‌ಪೆಕ್ಟರ್ ಹೇಮಾಮಲಾ ನೇತೃತ್ವದ ಪೊಲೀಸ್ ತಂಡ ತಿಂಗಳುಗಟ್ಟಲೆ ಕಾರ್ಯಾಚರಣೆ ನಡೆಸಿ ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದಾರೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಕೆಯ ಚಿಕ್ಕಮ್ಮ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಪೋಕ್ಸೋ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.