ಬೆಂಗಳೂರು: ಮಹಿಳೆಯೊಬ್ಬರಿಗೆ 1.40 ಕೋಟಿ ರೂ. ವಂಚನೆ ಮಾಡಿದ್ದಾರೆಂದು ಆರೋಪಿಸಿ ಜೆಡಿಎಸ್ ನಾಯಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಆರ್.ಪ್ರಭಾಕರ್ ರೆಡ್ಡಿ ಸೇರಿದಂತೆ ಇಬ್ಬರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರುಣಾ ರೆಡ್ಡಿ ಎಂಬುವವರು ಸದಾಶಿವನಗರ ಠಾಣೆಯಲ್ಲಿ ಪ್ರಭಾಕರ್ ರೆಡ್ಡಿ ಹಾಗೂ ಉದ್ಯಮಿ ಕೆ.ಎಸ್.ವಿನೋದ್ ಕುಮಾರ್ ವಿರುದ್ಧ ವಂಚನೆ ಪ್ರಕರಣದಡಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಪೊಗರು ಸಿನಿಮಾ ನಿರ್ಮಾಪಕನ ಮನೆ ಮೇಲೆ ಐಟಿ ದಾಳಿ
ಆರೋಪಿ ಪ್ರಬಾಕರ್ ರೆಡ್ಡಿ ಸದಾಶಿವನಗರದಲ್ಲಿರುವ ಅರುಣಾರೆಡ್ಡಿ ಅವರ ತಂದೆ ಜಯರಾಮ್ ರೆಡ್ಡಿ ಮನೆಗೆ ಬಂದು ಪುಸಲಾಯಿಸಿ, ನಗರದ ಡಬಲ್ ರಸ್ತೆಯಲ್ಲಿದ್ದ ಮನೆ ಖರೀದಿಸಿದ್ದರು. ಬಳಿಕ ನಯವಾಗಿ ಮಾತನಾಡಿ 2006ರ ಡಿ.30 ರಂದು ಚೆಕ್‌ಗಳ ಮೂಲಕ 1.40 ಕೋಟಿ ರೂ. ಹಣವನ್ನು ವಾಪಸ್ ಕಿತ್ತುಕೊಂಡಿದ್ದ. ಈಗ ಹಣ ಕೇಳಿದರೆ ಬೇಗೂರು ಬಳಿ ಇರುವ ಸರ್ವೇ ನಂ. 174/1 ರಲ್ಲಿ ಲೇಔಟ್ ಮಾಡಲಾಗುತ್ತಿದೆ. ಅದರಲ್ಲಿ 10 ಸೈಟ್ ನಿಮಗೆ ಕೊಡಲಾಗುವುದು ಎಂದು ಹೇಳಿದ್ದಾನೆ.
ಆದರೆ, ಕಳೆದ 14 ವರ್ಷದಿಂದಲೂ ಸೈಟ್ ಕೊಡುವುದಾಗಿ ಹೇಳಿಕೊಂಡು ಬರುತ್ತಿದ್ದ. ಬಳಿಕ ಅರುಣಾ ರೆಡ್ಡಿ ಹೆಸರಿಗೆ ಮಾಡಿಸಿರುವುದಾಗಿ ತಿಳಿಸಿದ್ದಾನೆ. ಆ ಬಳಿಕ ನವೆಂಬರ್‌ನಲ್ಲಿ ಸೈಟ್‌ಗಳ ಬಗ್ಗೆ ಉಪ ನೋಂದಣಿ ಕಚೇರಿಗೆ ಹೋಗಿ ವಿಚಾರಿಸಿದ್ದಾರೆ. ಆಗ ಬೇರೆಯವರ ಹೆಸರಿಗೆ ಖಾತೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ಆರೋಪಿ ವಿನೋದ್‌ಕುಮಾರ್ ಎಂಬುವವರ ಜತೆ ಸೇರಿ ಪ್ರಭಾಕರ್ ರೆಡ್ಡಿ ನಮ್ಮ ಕುಟುಂಬಸ್ಥರಿಗೆ ನಂಬಿಸಿ ಮೋಸ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.