ಸೋನಿಪತ್: ದೆಹಲಿ - ಹರಿಯಾಣ ಗಡಿ ಭಾಗವಾದ ಸಿಂಘು ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಂಜಾಬ್‌ನ ಲುಧಿಯಾನ ನಿವಾಸಿ ಲಾಬ್ ಸಿಂಗ್ ಮೃತ ರೈತ. ವಿಷ ಕುಡಿಯುತ್ತಿದ್ದಂತೆಯೇ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಪ್ರತಿಭಟನೆ ವೇಳೆ ಸೋನಿಪತ್‌ನ ಸಿಂಘು ಗಡಿಯಲ್ಲೇ ಈವರೆಗೆ 11 ರೈತರು ಪ್ರಾಣ ಕಳೆದುಕೊಂಡಂತಾಗಿದೆ.
ನಿನ್ನೆಯಷ್ಟೇ ಪಂಜಾಬ್‌ನ ಟಿಕ್ರಿ ಗಡಿಯಲ್ಲಿ ಒಬ್ಬ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಇನ್ನೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು.
ಇದನ್ನೂ ಓದಿ: ಕೃಷಿ ಕಾನೂನು, ರೈತರ ಪ್ರತಿಭಟನೆ ಕುರಿತು ವಿಚಾರಣೆ: ಉನ್ನತ ಮಟ್ಟದ ಸಮಿತಿ ರಚಿಸುವ ಸಾಧ್ಯತೆ
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರೈತರು ಗಡಿಭಾಗಗಳಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 8 ಬಾರಿ ರೈತ ಮುಖಂಡರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇಂದು ಕೃಷಿ ಕಾಯ್ದೆಗಳು ಹಾಗೂ ರೈತರ ಪ್ರತಿಭಟನೆ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ಪ್ರಕಟಿಸಲಿದೆ.