ತೆಲಂಗಾಣ: ಡೆತ್ನೋಟ್ ಬರೆದಿಟ್ಟು, ತಹಶೀಲ್ದಾರ್ ಕಚೇರಿ ಮುಂದೆಯೇ ಕೀಟನಾಶಕ ಸೇವಿಸಿ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿಯಲ್ಲಿ ನಡೆದಿದೆ.
ಕರೀಂನಗರ ಜಿಲ್ಲೆಯ ರೆಡ್ಡಿ ಪಲ್ಲಿ ಗ್ರಾಮದ ನಿವಾಸಿ ಮಂಧಲ ರಾಜಿ ರೆಡ್ಡಿ ಆತ್ಮಹತ್ಯೆಗೆ ಶರಣಾಗಿರುವ ರೈತ. "ಕಲ್ವಾ ಶ್ರೀರಾಂಪುರ ತಹಶೀಲ್ದಾರ್ ವೇಣು ಗೋಪಾಲ್, ವಿಆರ್‌ಒ ಅಧಿಕಾರಿಗಳಾದ ಗುರು ಮೂರ್ತಿ ಮತ್ತು ಸ್ವಾಮಿ ಇವರುಗಳು ತಮ್ಮ ತಂದೆಗೆ ಸೇರಿದ ಒಂದೂವರೆ ಎಕರೆ ಭೂಮಿಯನ್ನು ನನ್ನ ಹೆಸರಿಗೆ ಮಾಡುತ್ತಿಲ್ಲ. ಅಲ್ಲದೇ ಈ ಭೂಮಿಯನ್ನು ನಕಲಿ ಸಹಿ ಮೂಲಕ ಬೇರೊಬ್ಬರಿಗೆ ನೀಡಿದ್ದಾರೆ" ಎಂದು ಡೆತ್ನೋಟ್ನಲ್ಲಿ ರೈತ ಬರೆದಿದ್ದಾನೆ.
ಈ ಕುರಿತು ಮಾತನಾಡಿರುವ ಮೃತ ರೈತನ ಮಗ, ಈ ಜಾಗ ನಮ್ಮ ಪೂರ್ವಜರಿಗೆ ಸೇರಿದ್ದು. ಇದೀಗ ನಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ವ್ಯಕ್ತಿಯ ಸಹಿ ನಮ್ಮ ತಂದೆಯಂತೆಯೇ ಇದೆ. ನನ್ನ ತಂದೆ ಕಳೆದ ಎರಡು ವರ್ಷಗಳಿಂದ ಜಾಗವನ್ನು ಅವರ ಹೆಸರಿಗೆ ಮಾಡಿಸಿಕೊಳ್ಳಲು ಕಚೇರಿಗೆ ಅಲೆಯುತ್ತಿದ್ದರು. ಆದರೆ ಯಾವೊಬ್ಬ ಅಧಿಕಾರಿಯೂ ಸಹಾಯ ಮಾಡಲಿಲ್ಲ. ಭರವಸೆಯನ್ನು ಕಳೆದುಕೊಂಡ ನಮ್ಮ ತಂದೆ ಇದೀಗ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆ ಸಂಬಂಧ ಐಪಿಸಿ ಸೆಕ್ಷನ್ 306ರ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸುವುದಾಗಿ ಪೆದ್ದಪಲ್ಲಿ ಜಿಲ್ಲೆಯ ಡಿಸಿಪಿ ವಿ.ಸತ್ಯನಾರಾಯಣ ತಿಳಿಸಿದ್ದಾರೆ.