ಚಾಮರಾಜನಗರ: ಮದುವೆಗೆ ನಿರಾಕರಿಸಿದ್ದಕ್ಕೆ ಮನೆಯೊಳಗೆ ನುಗ್ಗಿ ಏಕಾಏಕಿ ಲಾಂಗು, ಮಚ್ಚುಗಳಿಂದ ದಾಳಿ ನಡೆಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಗ್ರಾಮದ ಶಿವಮಲ್ಲ ಶೆಟ್ಟಿ (50) ಎಂಬಾತ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ನೌಕರ ಎಂದು ತಿಳಿದು ಬಂದಿದೆ. ಕಳೆದ 4 ದಿನಗಳ ಹಿಂದೆ ಶಿವಮಲ್ಲ ಶೆಟ್ಟಿ ಹಾಗೂ ಆತನ ಮಗಳು ಮದುವೆ ವಿಚಾರದಲ್ಲಿ ಅದೇ ಗ್ರಾಮದ ಆನಂದ್ ಎಂಬಾತನನ್ನು ನಿರಾಕರಿಸಿದ್ದರು ಎನ್ನಲಾಗಿದೆ.
ಓದಿ: ಶ್ರೀಹರಿಕೋಟಾದಲ್ಲಿ ಡಿ.17ರಂದು ಸಿಎಮ್ಎಸ್ -01 ಸಂವಹನ ಉಪಗ್ರಹ ಉಡಾವಣೆ
ಇದಾದ ಬಳಿಕ ಗಲಾಟೆ ನಡೆದು ಆನಂದ್ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಇಂದು ಸಂಜೆ ಕಾರಿನಲ್ಲಿ ಬಂದ ನಾಲ್ವರು ಏಕಾಏಕಿ ಲಾಂಗು, ಮಚ್ಚುಗಳನ್ನು ಝಳಪಿಸಿ ಶಿವಮಲ್ಲ ಶೆಟ್ಟಿ ತಲೆಗೆ ಮತ್ತು ಕೈಗೆ ಹೊಡೆದು ಗಾಯಗೊಳಿಸಿದ್ದಾರೆ. ಹೆಂಡತಿ ಹಾಗೂ ಇಬ್ಬರು ಮಕ್ಕಳ ಕಿರುಚಾಟಕ್ಕೆ ದುಷ್ಕರ್ಮಿಗಳು ಕಿಟಕಿಯ ಗಾಜುಗಳನ್ನು ಪುಡಿಪುಡಿ ಮಾಡಿ ಕಾರು ಹತ್ತಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸದ್ಯ, ಆನಂದ್ ಹಾಗೂ ಆತನ ಸ್ನೇಹಿತರನ್ನು ಪತ್ತೆಹಚ್ಚಲು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ತಲಾಶ್ ನಡೆಸಿದ್ದಾರೆ.