ಚೆನ್ನೈ: ಸೆ. 17ರಂದು ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜನ್ಮದಿನ ಆಚರಿಸುತ್ತಿದ್ದ ವೇಳೆ ಗ್ಯಾಸ್ ತುಂಬಿದ (ಹೀಲಿಯಂ) ಬಲೂನ್ಗಳು ಸ್ಫೋಟಗೊಂಡ ಪರಿಣಾಮ ಸುಮಾರು 30 ಮಂದಿ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ಚೆನ್ನೈನ ಪಡಿ ಪಟ್ಟಣದಲ್ಲಿ ಬಿಜೆಪಿ ಕೃಷಿ ತಂಡ (BJP Agriculture Team) ಪಿಎಂ ಮೋದಿಯ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ವೇಳೆ ಗ್ಯಾಸ್ ತುಂಬಿದ ಸುಮಾರು 2000 ಬಲೂನ್ಗಳನ್ನು ಗಾಳಿಯಲ್ಲಿ ಹಾರಿ ಬಿಡಲು ಪ್ಲಾನ್ ಮಾಡಿದ್ದರು. ಕೃಷಿ ತಂಡದ ಉಪಾಧ್ಯಕ್ಷ ಮುತುರಾಮನ್ ಅವರನ್ನು ಸ್ವಾಗತಿಸುವ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿದ್ದಾರೆ. ಪಟಾಕಿಯ ಕಿಡಿ ಬಲೂನ್ಗೆ ತಗುಲಿದ್ದು, 500ಕ್ಕೂ ಹೆಚ್ಚು ಬಲೂನ್ಗಳು ಸ್ಫೋಟಿಸಿವೆ.
ಘಟನೆಯಲ್ಲಿ ಮುತುರಾಮನ್, ಬಿಜೆಪಿ ಕಾರ್ಯಕರ್ತರು ಹಾಗೂ ಮಕ್ಕಳು ಸೇರಿ 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಕೊರತ್ತೂರು ಪೊಲೀಸರು, ಕಾರ್ಯಕ್ರಮ ಆಯೋಜಕ ಪ್ರಭಾಕರನ್ ಹಾಗೂ ಮುತುರಾಮನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.