ರಾಯಚೂರು: ಮನೆ ಮುಂದೆ ಅಥವಾ ಮನೆ ಆವರಣದಲ್ಲಿ ನಿಲ್ಲಿಸುತ್ತಿದ್ದ ಬೈಕ್ಗಳನ್ನು ರಾತ್ರಿ ಹೊತ್ತು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ನೇತಾಜಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಯಶ್ವಸಿಯಾಗಿದ್ದಾರೆ.
ಜಿಲ್ಲೆಯ ಮಾನವಿ ತಾಲೂಕಿನ ಆರೋಲಿ ಗ್ರಾಮದ ತಾಯಪ್ಪ ಬಂಧಿತ. 3.40 ಲಕ್ಷ ಮೌಲ್ಯದ 15 ಬೈಕ್ಗಳನ್ನು ಬಂಧಿತನಿಂದ ಜಪ್ತಿ ಮಾಡಲಾಗಿದೆ. ಜೂ.26ರಂದು ಮಾಣಿಕಪ್ರಭು ಬಡಾವಣೆ ನಿವಾಸಿ ಜಾಹೀರ್ ಎಂಬವರ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ಭೇದಿಸಿದಾಗ ಆರೋಪಿ ತಾಯಪ್ಪ ಸೆರೆ ಸಿಕ್ಕಿದ್ದಾನೆ.
ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ನಿಜ ಒಪ್ಪಿಕೊಂಡಿದ್ದಾನೆ. ಒಂದು ವೇಳೆ ಬೈಕ್ ಕಳ್ಳತನ ಮಾಡುವಾಗ ಬೈಕ್ ಮುಟ್ಟುವದನ್ನು ಯಾರಾದರೂ ನೋಡಿದರೆ ಹುಚ್ಚನಂತೆ ವರ್ತಿಸುತ್ತಿದ್ದೆ. ಅವರು ಹೋದ ನಂತರ ಬೈಕ್ ಅನ್ನು ಅಲ್ಲಿಂದ ಎಗರಿಸುತ್ತಿದ್ದೆ ಎಂದು ಹೇಳಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನೇತಾಜಿ ಠಾಣೆ ಪೊಲೀಸರ ಕಾರ್ಯಾಚಾರಣೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದು, ಸಿಬ್ಬಂದಿಗೆ ಬಹುಮಾನ ನೀಡಿದರು. ನೇತಾಜಿ ನಗರ ಠಾಣೆಯ ಪಿಎಸ್ಐ ಶೀಲಾ ಮೂಗನಗೌಡ್ರ ನೇತೃತ್ವದ ತಂಡದಲ್ಲಿ ಸಿಬ್ಬಂದಿ ನಾಗರಾಜ, ಬಂದಯ್ಯ ಮಠದ್, ರಾಜಪ್ಪ, ಶಿವಣ್ಣ, ಅಶೋಕ್, ಶ್ರೀನಿವಾಸ್, ಗೌಸ್ ಪಾಷಾ, ವೆಂಕಟೇಶ್ ಇದ್ದರು.