ಭಿವಂಡಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣದಲ್ಲಿ ಸಂಭವಿಸಿದ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ ಎಂದು ಎನ್ಡಿಆರ್ಎಫ್ ಮಾಹಿತಿ ನೀಡಿದೆ.
ಸೆ. 21ರಂದು ಮುಂಜಾನೆ 3.40ರ ಸುಮಾರಿಗೆ ಭಿವಂಡಿಯ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಕಟ್ಟಡ ಕುಸಿದಿತ್ತು. 1984ರಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡದಲ್ಲಿ 40 ಫ್ಲ್ಯಾಟ್ಗಳಿದ್ದು, 150 ಜನರು ವಾಸವಾಗಿದ್ದರು. ಈವರೆಗೆ 25 ಜನರನ್ನು ರಕ್ಷಿಸಲಾಗಿದ್ದು, 41 ಜನರು ಸಾವನ್ನಪ್ಪಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಪೊಲೀಸರು, ಸ್ಥಳೀಯ ಅಧಿಕಾರಿಗಳು, ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿದ್ದು, ಇಂದು ಬೆಳಗ್ಗೆ 11.45ಕ್ಕೆ ಕಾರ್ಯಾಚರಣೆ ಮುಕ್ತಾಯಗೊಳಿಸಲಾಗಿದೆ.
ಘಟನೆ ಸಂಬಂಧ ಇಬ್ಬರು ಪಾಲಿಕೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಕಟ್ಟಡದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.