ನಿಯಾಮಿ (ನೈಜರ್): ಜಿಹಾದಿ - ಇಸ್ಲಾಮಿಕ್ ಉಗ್ರ ಸಂಘಟನೆಯಾದ ಬೊಕೊ ಹರಾಮ್ ನಡೆಸಿದ ದಾಳಿಯಲ್ಲಿ 28 ಜನರು ಸಾವನ್ನಪ್ಪಿರುವ ಘಟನೆ ನೈಜರ್ ದೇಶದಲ್ಲಿ ನಡೆದಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ನೈಜರ್‌ನ ಆಗ್ನೇಯ ಭಾಗದಲ್ಲಿನ ತೌಮೋರ್ ಎಂಬ ಗ್ರಾಮಕ್ಕೆ ನುಗ್ಗಿದ ಉಗ್ರರು ಮಾರುಕಟ್ಟೆ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದವರ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಕೆಲವರು ಬೆಂಕಿಯಿಂದ ಪಾರಾಗಲು ನದಿಗೆ ಹಾರಿ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಆರಂಭವಾದ ದಾಳಿಯು ಭಾನುವಾರ ಬೆಳಗ್ಗೆ ಅಂತ್ಯವಾಗಿತ್ತು ಎಂದು ಸೋಮವಾರ ರಾತ್ರಿ ನೈಜರ್ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ: ವಿಶೇಷ ಅಂಕಣ: ನೈಜೀರಿಯಾದಲ್ಲಿ ಮತ್ತೆ ಹರಿದ ನೆತ್ತರು.. 'ಜನಾಂಗೀಯ ಹತ್ಯಾಕಾಂಡ'ದಲ್ಲಿ 110 ಮಂದಿ ಬಲಿ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಫಾ ನಗರದ ಗವರ್ನರ್ ಇಸ್ಸಾ ಲೆಮೈನ್, ದುರಂತದಲ್ಲಿ ನೂರಾರು ಮನೆಗಳು ನಾಶವಾಗಿವೆ, ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕಾಗಿ ನೈಜರ್ ಸರ್ಕಾರ 72 ಗಂಟೆಗಳ ಶೋಕಾಚರಣೆ ಘೋಷಿಸಿದೆ ಎಂದು ಹೇಳಿದ್ದಾರೆ.
ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.