ಹುಬ್ಬಳ್ಳಿ: ರಾತ್ರಿ ವೇಳೆ ಸಂಚರಿಸುವ ರೈಲುಗಳಲ್ಲಿ ಚಹಾ ಮಾರುವ ವೇಷದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮಂಟೂರ ರಸ್ತೆ ಜುಬಿಲಿ ಚರ್ಚ್ ಬಳಿಯ ನಿವಾಸಿ ಯೋಹಾನಕುಮಾರ ಪ್ರಾಂಚೀಸ್ ಕುಂರ್ದತಿ (20) ಹಾಗೂ ಪ್ರೇಮಕುಮಾರ ಅಲಿಯಾಸ್ ಚಿಂಟು ಏಸು ಸೂರ್ಯಪಲ್ಲಿ (25) ಬಂಧಿತರು. ಅವರಿಂದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹಿಳಾ ಪ್ರಯಾಣಿಕರ ವ್ಯಾನಿಟಿ ಬ್ಯಾಗ್ ಕಳ್ಳತನ ಕುರಿತು ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆ ರೈಲ್ವೆ ಡಿವೈಎಸ್ಪಿ ಪುಷ್ಪಲತಾ ಮಾರ್ಗದರ್ಶನದಲ್ಲಿ ರೈಲ್ವೆ ವೃತ್ತದ ಇನ್ಸ್‌ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಹಾಗೂ ಪಿಎಸ್ಐ ಸತ್ಯಪ್ಪ ಎಂ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.