ಆನೇಕಲ್ : ಶ್ರಮಿಕರ ಬಾಳಿನಲ್ಲಿ ಕುಡಿತ ವಿಪರೀತವಾದರೆ ಏನೆಲ್ಲಾ ಅನಾಹುತವಾಗುತ್ತದೆ ಎನ್ನುವುದಕ್ಕೆ ಇಲ್ಲಿನ ಕೊಲೆ ಸಾಕ್ಷಿಯಾಗಿ ಕಾಣುತ್ತದೆ. ಇಬ್ಬರು ಸ್ನೇಹಿತರ ನಡುವೆ ಆಕಸ್ಮಿಕವಾಗಿ ಶುರುವಾದಂತಹ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಸೆಲ್ವನ್ ಎಂಬ ತಮಿಳುನಾಡಿನ ಧರ್ಮಪುರಿ ನಿವಾಸಿ, ಇತ್ತೀಚೆಗೆ ಲಾಕ್‌ಡೌನ್ ಇದ್ದಿದ್ದರಿಂದ ಕೆಲಸ ಅರಸಿ ಆನೇಕಲ್ ಭಾಗಕ್ಕೆ ಸ್ನೇಹಿತರೊಂದಿಗೆ ಬಂದಿದ್ದ. ಸರ್ಜಾಪುರ ರಸ್ತೆ ಹೆಗ್ಗೊಂಡನಹಳ್ಳಿಯ ಪಿಎಸ್ಪಿ (PSP) ಟೈಲ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಅಲ್ಲಿಯೇ ಶೆಡ್ನಲ್ಲಿ ವಾಸವಾಗಿದ್ರು. ಆದ್ರೆ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಸ್ನೇಹಿತ ಧರ್ಮರಾಜ ಮತ್ತು ಸೆಲ್ವನ್ ನಡುವೆ ಜಗಳ ಶುರುವಾಗಿ, ತಾರಕಕ್ಕೆ ಹೋಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.
ಕೆಲಸ ಅರಸಿ ಬಂದಿದ್ದ ಒಂದೇ ಗ್ರಾಮದ ಏಳು ಜನರು, ಕಳೆದ ಒಂದು ವಾರಗಳಿಂದ ಕೆಲಸ ಮಾಡಿಕೊಂಡಿದ್ದರು. ಆದ್ರೆ ನಿನ್ನೆ ಲಾಕ್ ಡೌನ್ ಓಪನ್ ಆದ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಮದ್ಯ ತಂದಿದ್ದಾರೆ. ಆದ್ರೆ ಧರ್ಮದೊರೆ ಮತ್ತು ಸೆಲ್ವನ್ ಪ್ರತ್ಯೇಕವಾಗಿ ಮದ್ಯ ಸೇವಿಸುತ್ತಾ ಕೂತಿದ್ದಾರೆ. ಪ್ರಾರಂಭದಲ್ಲಿ ಇಬ್ಬರು ಚೆನ್ನಾಗಿಯೇ ಮಾತನಾಡಿಕೊಂಡಿದ್ದು ನಂತರ ಜಗಳ ಪ್ರಾರಂಭವಾಗಿ ಕೈ ಕೈ ಮಿಲಾಯಿಸಕೊಂಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಕೋಪಗೊಂಡ ಸೆಲ್ವನ್ ಮನೆಯಲ್ಲಿದ್ದ ಚಾಕುವಿನಿಂದ ಧರ್ಮದೊರೆಗೆ ಚುಚ್ಚಿದ್ದಾನೆ. ಎಣ್ಣೆ ನಶೆಯಲ್ಲಿ ತಾನೇನು ಮಾಡಿದ್ದೆ ಅಂತ ಆತನಿಗೆ ಗೊತ್ತಾಗಿಲ್ಲ. ನಂತರ ಹೊರಗಿದ್ದ ತಮ್ಮವರಿಗೆ ವಿಚಾರ ಹೇಳಿದ್ದಾನೆ. ತಕ್ಷಣ ಅಕ್ಕಪಕ್ಕದ ಮನೆಯವರಿಗೂ ಮಾಹಿತಿ ಗೊತ್ತಾಗಿದ್ದು, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಸಿದ್ದಾರೆ. ಆದ್ರೆ ಅಷ್ಟೊತ್ತಿಗೆ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಬಳಿಕ ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮರಣೊತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.