ಉಪ್ಪಿನಂಗಡಿ: ಫೇಸ್‍ಬುಕ್ ನಲ್ಲಿ ಯುವತಿಯ ಸ್ನೇಹಗಳಿಸಿ ಆಕೆಯೊಂದಿಗೆ ತೀರ್ಥಯಾತ್ರೆ ನಡೆಸಿ, ಅಲ್ಲಿ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಬಂಟ್ರ ಗ್ರಾಮದ ಮರ್ಧಾಳ ಪಾಲತ್ತಡ್ಕ ಮನೆ ನಿವಾಸಿ ಶೇಖ್ ಇಸ್ಮಾಯಿಲ್ ಎಂಬುವರ ಪುತ್ರ ಅಬ್ದುಲ್ ರಜಾಕ್ ಎಂಬಾತ ತನ್ನ ಹೆಸರನ್ನು ಖುಷಿಕ್ ಯಾನೆ ಸಂಜು ಎಂದು ಯುವತಿಗೆ ಪರಿಚಯಿಸಿಕೊಂಡಿದ್ದ. ತನಗೆ ಹೆತ್ತವರಿಲ್ಲ, ಉತ್ತಮ ಸ್ನೇಹಿತರನ್ನು ಬಯಸುತ್ತಿದ್ದೇನೆ ಎಂದು ಫೇಸ್‍ಬುಕ್ ನಲ್ಲಿ ಕೌಕ್ರಾಡಿ ಗ್ರಾಮದ 24ರ ಹರೆಯದ ಯುವತಿಯನ್ನು ಸಂಪರ್ಕಿಸಿದ್ದ. ಈತನ ಮಾತು ನಂಬಿದ ಯುವತಿ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ, ಬಳಿಕ ವಾಟ್ಸಪ್ ನಂಬರ್ ನೀಡಿ ಇವರು ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ನ.1 ರಂದು ಯುವತಿಯು ಮನೆಯವರ ಒಪ್ಪಿಗೆ ಪಡೆದು ಆತನೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದಳು. ಈ ವೇಳೆ ಹಣೆಯಲ್ಲಿ ನಾಮ ಬಳಿದು ಯುವತಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದ ರಜಾಕ್, ಬಳಿಕ ಆ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ದುರುದ್ದೇಶಪೂರಿತವಾಗಿ ಈ ಕೃತ್ಯವೆಸಗಿರುವುದು, ಸುಳ್ಳು ಹೇಳಿ ವಂಚಿಸಿದ ಎಂಬ ಕಾರಣದಿಂದಾಗಿ ಈತನ ವಿರುದ್ದ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಆರೋಪಿಯು ಕನಕರಾಜು ಎಂಬ ಹೆಸರಿನಲ್ಲೂ ಫೇಸ್ ಬುಕ್ ನಲ್ಲಿ ನಕಲಿ ಖಾತೆ ಹೊಂದಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.