ಕೀವ್( ಉಕ್ರೇನ್): ರಷ್ಯಾ ವ್ಯಾಪ್ತಿಗೆ ಬರುವ ಇಂಧನ ಡಿಪೋ ಮೇಲೆ ಉಕ್ರೇನ್ ದಾಳಿ ನಡೆಸಿದೆ ಎಂಬ ರಷ್ಯಾದ ಆರೋಪಗಳ ಬಗ್ಗೆ ಚರ್ಚಿಸಲು ತಯಾರಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ರಷ್ಯಾ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು 'ನನ್ನ ಯಾವುದೇ ಆದೇಶಗಳ ಬಗ್ಗೆ ಚರ್ಚಿಸಲು ಇಷ್ಟ ಪಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಒಬ್ಬ ಕಮಾಂಡರ್ ಇನ್ ಚೀಫ್ ಹಾಗೂ ಈ ದೇಶದ ಒಬ್ಬ ನಾಯಕನಾಗಿ ಚರ್ಚಿಸಲು ಇಷ್ಟ ಪಡಲ್ಲ, ದಯವಿಟ್ಟು ಕ್ಷಮಿಸಿ, ನಾನು ಉಕ್ರೇನ್‌ನ ಮಿಲಿಟರಿ ಸಶಸ್ತ್ರ ಪಡೆಗಳೊಂದಿಗೆ ಮಾತ್ರ ಕೆಲ ವಿಷಯಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಎಂದು ಇದೇ ವೇಳೆ ಝೆಲೆನ್ಸ್ಕಿ ಹೇಳಿದ್ದಾರೆ.
ನೀವು ಅರ್ಥ ಮಾಡಿಕೊಳ್ಳಬೇಕು, ಅವರು ಯಾವ ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟಿದ್ದಾರೆ. ಎಲ್ಲಿಂದ ಕ್ಷಿಪಣಿಗಳನ್ನು ಹಾರಿಸುತ್ತಿದ್ದರು ಎಂಬುದನ್ನು ಗಮನಿಸಬೇಕು ಎಂದು ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ. ಬೆಲ್ಗೊರೊಡ್ ಉಕ್ರೇನ್‌ನ ಗಡಿಯಲ್ಲಿರುವ ರಷ್ಯಾದ ನಗರ. ಈ ನಗರದ ಇಂಧನ ಸಂಗ್ರಹಣಾ ಘಟಕದ ಮೇಲೆ ಉಕ್ರೇನ್ ಎರಡು Mi -24 ಹೆಲಿಕಾಪ್ಟರ್ಗಳು ದಾಳಿ ನಡೆಸಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಆರೋಪಿಸಿತ್ತು.
ರಷ್ಯಾದ ಬೆಲ್ಗೊರೊಡ್ ನಗರದ ಡಿಪೋ ತನ್ನ ಪಡೆಗಳಿಗೆ ಇಂಧನ ಮತ್ತು ಯುದ್ಧ ಸಾಮಗ್ರಿಗಳನ್ನು ಪೂರೈಸುವ ಕೇಂದ್ರವಾಗಿತ್ತು. ಈ ಕೇಂದ್ರದ ಮೇಲಿನ ದಾಳಿ ಭಾರಿ ನಷ್ಟಕ್ಕೆ ಕಾರಣವಾಗಿದೆ ಎಂದು ಇಂಗ್ಲೆಂಡ್ನ ರಕ್ಷಣಾ ಸಚಿವಾಲಯ ಇತ್ತೀಚಿನ ಗುಪ್ತಚರ ಅಪ್‌ಡೇಟ್‌ನಲ್ಲಿ ಹೇಳಿದೆ.