ಸ್ಯಾನ್ ಫ್ರಾನ್ಸಿಸ್ಕೊ : ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿ ಅತ್ಯಧಿಕ ವೀವ್ಸ್ ಪಡೆಯುವ ಆಸೆಯಿಂದ ವಿಮಾನವೊಂದು ಅಪಘಾತವಾದಂತೆ ತೋರ್ಪಡಿಸಿದ ಯೂಟ್ಯೂಬರ್ ಒಬ್ಬ ಈಗ ಶಿಕ್ಷೆ ಅನುಭವಿಸುವ ಸರದಿ ಬಂದಿದೆ. 20 ವರ್ಷದ ಡೇನಿಯಲ್ ಜಾಕೋಬ್ಸ್ ಎಂಬಾತ ತಾನು ವಿಮಾನವನ್ನು ಉದ್ದೇಶಪೂರ್ವಕವಾಗಿ ಅಪಘಾತ ಮಾಡಿದ್ದನ್ನು ಹಾಗೂ ಆ ವಿಷಯವನ್ನು ತನಿಖಾ ಸಂಸ್ಥೆಗಳಿಂದ ಮುಚ್ಚಿಟ್ಟಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಡಿಸೆಂಬರ್ 23, 2021 ರಂದು, ಜಾಕೋಬ್ ಎಂಬಾತ 'ಐ ಕ್ರ್ಯಾಶ್ಡ್ ಮೈ ಏರ್‌ಪ್ಲೇನ್' ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದ. ಇದರಲ್ಲಿ ಆತ ವಿಮಾನದಿಂದ ಪ್ಯಾರಾಶೂಟ್ ಮೂಲಕ ಜಿಗಿಯುವುದು ಮತ್ತು ನಂತರ ವಿಮಾನ ಕ್ರ್ಯಾಶ್ ಆಗುವ ಚಿತ್ರೀಕರಣವಿತ್ತು. ಹಣ ಗಳಿಸುವ ಸಲುವಾಗಿ ಯೂಟ್ಯೂಬ್ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
2021ರ ನವೆಂಬರ್ 24 ರಂದು ಜಾಕೋಬ್ ಏಕಾಂಗಿಯಾಗಿ ಲೊಂಪೋಕ್ ಸಿಟಿ ವಿಮಾನ ನಿಲ್ದಾಣದಿಂದ ವಿಮಾನ ಚಲಾಯಿಸಿಕೊಂಡು ಮಮೋತ್ ಲೇಕ್ ಪ್ರದೇಶಕ್ಕೆ ಹೊರಟಿದ್ದ. ಆದರೆ, ವಾಸ್ತವದಲ್ಲಿ ಆತನಿಗೆ ಮಮೋತ್ ಲೇಕ್ಗೆ ಹೋಗುವ ಉದ್ದೇಶವಿರಲಿಲ್ಲ. ಬದಲಾಗಿ ಮಾರ್ಗಮಧ್ಯದಲ್ಲಿ ಪ್ಯಾರಾಶೂಟ್ ಕಟ್ಟಿಕೊಂಡು ವಿಮಾನದಿಂದ ಜಿಗಿದು, ವಿಮಾನ ಅಪಘಾತವಾಗುವ ದೃಶ್ಯಾವಳಿಯನ್ನು ಸೆರೆ ಹಿಡಿಯುವುದು ಆತನ ಉದ್ದೇಶವಾಗಿತ್ತು. ವಿಮಾನ ಹಾರಿಸುವ ಮುನ್ನ ಆತ ವಿಮಾನದ ಹಲವಾರು ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಜೊತೆಗೆ ತಾನು ಪ್ಯಾರಾಶೂಟ್ ಕಟ್ಟಿಕೊಂಡು ವೀಡಿಯೊ ಕ್ಯಾಮೆರಾ ಮತ್ತು ಸೆಲ್ಫಿ ಸ್ಟಿಕ್ ಹಿಡಿದುಕೊಂಡಿದ್ದ.
ಟೇಕ್ ಆಫ್ ಆದ ಸುಮಾರು 35 ನಿಮಿಷಗಳ ನಂತರ, ಸಾಂಟಾ ಮಾರಿಯಾ ಬಳಿಯ ಲಾಸ್ ಪ್ಯಾಡ್ರೆಸ್ ರಾಷ್ಟ್ರೀಯ ಅರಣ್ಯದ ಮೇಲೆ ಹಾರುತ್ತಿರುವಾಗ, ಜಾಕೋಬ್ ವಿಮಾನದಿಂದ ಹೊರಬಂದಿದ್ದ ಮತ್ತು ನೆಲಕ್ಕೆ ಬೀಳುವುದನ್ನು ವೀಡಿಯೊ ಮಾಡಿದ್ದ. ಸೆಲ್ಫಿ ಸ್ಟಿಕ್‌ನಲ್ಲಿ ಅಳವಡಿಸಲಾದ ವಿಡಿಯೋ ಕ್ಯಾಮೆರಾ ಮತ್ತು ವಿಮಾನದಲ್ಲಿ ಅಳವಡಿಸಿದ ವಿಡಿಯೋ ಕ್ಯಾಮೆರಾಗಳನ್ನು ಬಳಸಿ, ಜಾಕೋಬ್ ವಿಮಾನವನ್ನು ಲಾಸ್ ಪ್ಯಾಡ್ರೆಸ್ ನ್ಯಾಷನಲ್ ಫಾರೆಸ್ಟ್‌ನಲ್ಲಿ ಡ್ರೈ ಬ್ರಷ್ ಪ್ರದೇಶಕ್ಕೆ ಇಳಿಸಿ ರೆಕಾರ್ಡ್ ಮಾಡಿಕೊಂಡಿದ್ದ. ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲು ವಿಮಾನ ಅಪಘಾತ ಮಾಡಿದ್ದಕ್ಕಾಗಿ ಈಗ ಜಾಕೋಬ್ 20 ವರ್ಷಗಳ ಶಿಕ್ಷೆ ಅನುಭವಿಸಬೇಕಿದೆ.
YouTube ಇದು ವೀಡಿಯೊಗಳನ್ನು ಹಂಚಿಕೊಳ್ಳಲು ವಿನ್ಯಾಸಗೊಳಿಸಲಾದ ವೆಬ್‌ಸೈಟ್ ಆಗಿದೆ. ಪ್ರಪಂಚದಾದ್ಯಂತದ ಲಕ್ಷಾಂತರ ಬಳಕೆದಾರರು ಯೂಟ್ಯೂಬ್ನಲ್ಲಿ ಖಾತೆಗಳನ್ನು ರಚಿಸಿದ್ದಾರೆ. ಇದರಲ್ಲಿ ಅಪ್ಲೋಡ್ ಮಾಡಿದ ವೀಡಿಯೊಗಳನ್ನು ಯಾರು ಬೇಕಾದರೂ ವೀಕ್ಷಿಸಬಹುದು. ಪ್ರತಿ ದಿನದ ಪ್ರತಿ ನಿಮಿಷ, 35 ಗಂಟೆಗಳಿಗೂ ಹೆಚ್ಚು ಅವಧಿಯ ವೀಡಿಯೊಗಳನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗುತ್ತದೆ. ವಿಡಿಯೊ ಫೈಲ್‌ಗಳು ತುಂಬಾ ದೊಡ್ಡದಾಗಿದ್ದಾಗ ಅವನ್ನು ನೇರವಾಗಿ ಬೇರೆಯವರಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ನೀವು ವೀಡಿಯೊವನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡುವ ಮೂಲಕ, ಇತರ ವ್ಯಕ್ತಿಗೆ url 'ಲಿಂಕ್' ಅನ್ನು ಕಳುಹಿಸುವ ಮೂಲಕ ವೀಡಿಯೊವನ್ನು ಹಂಚಿಕೊಳ್ಳಬಹುದು.
2005 ರಲ್ಲಿ ಯೂಟ್ಯೂಬ್ ಅನ್ನು ಅನ್ನು ಆರಂಭಿಸಿದಾಗ, ಜನರು ಮೂಲ ವೀಡಿಯೊ ವಿಷಯವನ್ನು ಪೋಸ್ಟ್ ಮಾಡಲು ಮತ್ತು ಹಂಚಿಕೊಳ್ಳುವ ಉದ್ದೇಶದಿಂದ ಇದನ್ನು ತಯಾರಿಸಲಾಗಿತ್ತು. ಆದರೆ ಅಂದಿನಿಂದ ಇದು ನೆಚ್ಚಿನ ಕ್ಲಿಪ್‌ಗಳು, ಹಾಡುಗಳು ಮತ್ತು ಜೋಕ್‌ಗಳನ್ನು ಸಂಗ್ರಹಿಸಲು ಆರ್ಕೈವ್ ಆಗಿ ಮಾರ್ಪಟ್ಟಿದೆ. ಜೊತೆಗೆ ಕಂಪನಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಮಾರ್ಕೆಟಿಂಗ್ ಸೈಟ್ ಆಗಿದೆ.
ಇದನ್ನೂ ಓದಿ : ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಮಾರಾಟ ನಿಲ್ಲಿಸುವಂತೆ ಇ -ಕಾಮರ್ಸ್ ಪ್ಲಾಟ್ಫಾರ್ಮ್ಗಳಿಗೆ ಆದೇಶ