ಜಿನೀವಾ (ಸ್ವಿಟ್ಜರ್ಲೆಂಡ್): ಕೋವಿಡ್ ಮಹಾಮಾರಿಯಿಂದ ತತ್ತರಿಸಿರುವ ವಿಶ್ವದ ಹಲವು ರಾಷ್ಟ್ರಗಳು ಅದರ ಪರಿಣಾಮದಿಂದ ಚೇತರಿಸಿಕೊಳ್ಳುತ್ತಿವೆ. ಆದರೆ, ಇದರ ನಡುವೆ ಇದೀಗ ಹಲವು ರೀತಿಯ ವೈರಸ್‌ಗಳು ಮತ್ತು ಕಾಯಿಲೆಗಳು ಹೆಚ್ಚಿನ ವೇಗದಲ್ಲಿ ಹರಡುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ವಿಶೇಷವಾಗಿ ಮತ್ತೆ ಕೋವಿಡ್ ಸೋಂಕು, ಜ್ವರ, ಉಸಿರಾಟದ ಕಾಯಿಲೆಗಳು ಸೇರಿದಂತೆ ಅನೇಕ ವೈರಸ್‌ಗಳು ಉಲ್ಬಣಗೊಳ್ಳುತ್ತಿವೆ. ಆದ್ದರಿಂದ ಮುನ್ನೆಚ್ಚರಿಕೆ ಅನುಸರಿಸುವ ಮೂಲಕ ಸುರಕ್ಷಿತ ಮತ್ತು ಜಾಗರೂಕರಾಗಿರಿ ಎಂದು ನಾಗರಿಕರಿಗೆ ಸೂಚಿಸಲಾಗಿದೆ. ಜೊತೆಗೆ ನಿಮ್ಮ ಪ್ರೀತಿಪಾತ್ರರು ಸಹ ಸುರಕ್ಷಿತವಾಗಿರಲು ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದೆ.
ಅಗತ್ಯವಿರುವ ಲಸಿಕೆಗಳು, ಮಾಸ್ಕ್‌ಗಳು, ದೈಹಿಕ ಅಂತರ, ಸ್ವಯಂ ಪರೀಕ್ಷೆ, ಅನಾರೋಗ್ಯವಿದ್ದರೆ ಮನೆಯಲ್ಲೇ ಇರುವುದು ಮತ್ತು ಕೈಗಳ ನೈರ್ಮಲ್ಯದಂತಹ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಯಾವುದೇ ಆರೋಗ್ಯ ಬಗ್ಗೆ ಮುಂಚಿತವಾಗಿ ಎಚ್ಚೆತ್ತುಕೊಂಡರೆ ಅದರ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ -19 ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಕೋವ್ ತಿಳಿಸಿದ್ದಾರೆ.
ಕೋವಿಡ್‌ನ ಓಮಿಕ್ರಾನ್ ರೂಪಾಂತರದ ಬಗ್ಗೆಯೂ ಮಾತನಾಡಿರುವ ಅವರು, ಪ್ರಸ್ತುತ ಪ್ರಪಂಚದಾದ್ಯಂತ 500ಕ್ಕೂ ಹೆಚ್ಚು ಓಮಿಕ್ರಾನ್ ರೂಪಾಂತರಗಳು ಚಾಲ್ತಿಯಲ್ಲಿವೆ. ಈ ರೂಪಾಂತರಗಳ ಹರಡುವಿಕೆ ಮತ್ತು ರೋಗನಿರೋಧಕದಿಂದ ಹೇಗೆ ಪಾರಾಗುತ್ತವೆ ಹಾಗೂ ಅವುಗಳ ತೀವ್ರತೆಯನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮುಖ್ಯವಾಗಿ ಅಮೆರಿಕದಲ್ಲಿ ಉಸಿರಾಟ ಸಂಬಂಧಿತ ಪ್ರಕರಣಗಳಲ್ಲಿ ಹೆಚ್ಚಳ ಕುರಿತಾಗಿ ಉಲ್ಲೇಖಿಸಿರುವ ತಜ್ಞರು ಎಚ್ಚರಿಸಿದ್ದಾರೆ. ಇದೇ ಋತುವಿನಲ್ಲಿ ಅಮೆರಿಕದಲ್ಲಿ 1.3 ಕೋಟಿ ಉಸಿರಾಟ ಸಂಬಂಧಿ ಪ್ರಕರಣಗಳು ದಾಖಲಾಗಿದ್ದು, 1 ಲಕ್ಷದ 20 ಸಾವಿರ ಜನರು ಆಸ್ಪತ್ರೆ ಸೇರಿದ್ದಾರೆ. ಜ್ವರ ಸಂಬಂಧಿತ 7,300 ಸಾವುಗಳು ಸಂಭವಿಸಿವೆ ಎಂದು ಸಿಡಿಸಿ ವರದಿ ಬಹಿರಂಗಪಡಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ದೃಢ: ಆತಂಕ ಬೇಡ ಎಂದ ಆರೋಗ್ಯ ಸಚಿವರು