ಟೆಕ್ಸಾಸ್: ಪೋರ್ಚುಗಲ್, ಸ್ಪೇನ್ ಸೇರಿದಂತೆ ಯುರೋಪ್ ರಾಷ್ಟ್ರಗಳಲ್ಲಿ ಕಾಡ್ಗಿಚ್ಚು, ಬಿಸಿಗಾಳಿಯು ನಿಸರ್ಗ ಮತ್ತು ಪ್ರಾಣ ಹಾನಿ ಉಂಟು ಮಾಡುತ್ತಿದೆ. ಇದೀಗ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲೂ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ ಅಪಾರ ಪ್ರಮಾಣದ ಕಾಡು, ಪ್ರಾಣಿ ಸಂಕುಲ ನಾಶವಾಗಿದೆ.
ಶುಷ್ಕ ವಾತಾವರಣ ಮತ್ತು ಬಲವಾದ ಬಿಸಿ ಗಾಳಿಯಿಂದಾಗಿ ಕಾಡ್ಗಿಚ್ಚು ಉಂಟಾಗುತ್ತಿದೆ ಎಂದು ಅಲ್ಲಿನ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ 6 ಮನೆಗಳು ಬೆಂಕಿಗೆ ಆಹುತಿಯಾಗಿವೆ. ಸುಮಾರು 300 ಮನೆಗಳನ್ನು ಸ್ಥಳಾಂತರ ಮಾಡಲಾಗಿದೆ. 4 ಸಾವಿರ ಎಕರೆ ಅರಣ್ಯ ಪ್ರದೇಶ ಅಗ್ನಿಜ್ವಾಲೆಗೆ ಬೆಂದಿದೆ. ಇದು ಅಪಾರ ಪ್ರಮಾಣದ ಅರಣ್ಯ ಸಂಕುಲದ ನಾಶಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟೆಕ್ಸಾಸ್ನ ಫೋರ್ಟ್ವರ್ತ್ ಪಶ್ಚಿಮದ 113 ಕಿಲೋಮೀಟರ್ ದೂರದಲ್ಲಿರುವ ಪೊಸ್ಸಮ್ ಕಿಂಗ್‌ಡಮ್ ಸರೋವರದ ಭಾಗದ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದು ದಿನೇ ದಿನೇ ವ್ಯಾಪಿಸುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಸರೋವರದ ದಡದಲ್ಲಿರುವ ಮನೆಗಳನ್ನು ತೆರವು ಮಾಡಿಸುತ್ತಿದ್ದಾರೆ.
ಕಾಡ್ಗಿಚ್ಚಿನಲ್ಲಿ ಯಾವುದೇ ಮಾನವ ಪ್ರಾಣ ಹಾನಿ ಬಗ್ಗೆ ಈವರೆಗೂ ವರದಿಯಾಗಿಲ್ಲ. 43 ಡಿಗ್ರಿ ಸೆಲ್ಸಿಯಸ್ ಉಷ್ಠಾಂಶ ದಾಖಲಾಗಿದೆ. ಹೆಚ್ಚಿನ ತಾಪಮಾನದಿಂದಾಗಿ ವಾತಾವರಣ ಬಿಸಿಯಾಗಿದೆ. ಗಂಟೆಗೆ 40 ಕಿಮೀ ವೇಗದಲ್ಲಿ ಬಿಸಿಗಾಳಿ ಬೀಸುತ್ತಿದೆ.
ರಾಷ್ಟ್ರೀಯ ಹವಾಮಾನ ಇಲಾಖೆಯು ಉತ್ತರ ಮತ್ತು ಮಧ್ಯ ಟೆಕ್ಸಾಸ್ ಮತ್ತು ಪಶ್ಚಿಮ ಮತ್ತು ಪೂರ್ವ ಒಕ್ಲಹೋಮದಲ್ಲಿ ಕಾಡ್ಗಿಚ್ಚಿನ ಎಚ್ಚರಿಕೆಯನ್ನು ನೀಡಿದೆ. ಇದು ಕಳೆದ 10 ವರ್ಷಗಳಲ್ಲೇ ಅತ್ಯಧಿಕ ಬೆಂಕಿ ಅನಾಹುತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ರೇಸ್ನಲ್ಲಿ ಮತ್ತಷ್ಟು ಮುನ್ನಡೆ.. 4ನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದ ರಿಷಿ ಸುನಕ್