ಜಿನೀವಾ (ಸ್ವಿಟ್ಜರ್‌ಲ್ಯಾಂಡ್): ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಚಾಟ್‌ಜಿಪಿಟಿ, ಬಾರ್ಡ್ ಮತ್ತು ಬರ್ಟ್‌ನಂತಹ ಕೃತಕ ಬುದ್ಧಿಮತ್ತೆ (ಎಐ) ಉಪಕರಣಗಳನ್ನು ಬಳಸುವಾಗ ಅದು ಒಳಗೊಂಡಿರುವ ಅಪಾಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಕಡ್ಡಾಯ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮಂಗಳವಾರ ಹೇಳಿದೆ.
ವೃತ್ತಿಪರರು, ರೋಗಿಗಳು, ಸಂಶೋಧಕರು ಮತ್ತು ವಿಜ್ಞಾನಿಗಳನ್ನು ಬೆಂಬಲಿಸಲು ರಚಿಸಲಾಗಿರುವ ಕೃತಕ ಬುದ್ಧಿಮತ್ತೆಯ ಉಪಕರಣಗಳು ಸೇರಿದಂತೆ ತಂತ್ರಜ್ಞಾನಗಳ ಸೂಕ್ತ ಬಳಕೆಯ ಬಗ್ಗೆ WHO ಉತ್ಸುಕವಾಗಿದೆ. ಯಾವುದೇ ಹೊಸ ತಂತ್ರಜ್ಞಾನ ಬಳಸುವಾಗ ಎಚ್ಚರಿಕೆ ವಹಿಸುವುದು ಮುಖ್ಯ. ಕೆಲವೊಮ್ಮೆ ತಂತ್ರಜ್ಞಾನಗಳು ದೊಡ್ಡ ಭಾಷಾ ಮಾದರಿ ಉಪಕರಣಗಳೊಂದಿಗೆ (LLMs) ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಳವಳವಿದೆ ಎಂದು ತಿಳಿಸಿದೆ.
ಎಐ (ಕೃತಕ ಬುದ್ಧಿಮತ್ತೆ)ಗೆ ತರಬೇತಿ ನೀಡಲು ಬಳಸಲಾಗುವ ಅಂಕಿಅಂಶಗಳು ಪಕ್ಷಪಾತದಿಂದ ಕೂಡಿರಬಹುದು ಹಾಗೂ ತಪ್ಪು ದಾರಿಗೆಳೆಯುವ ಅಥವಾ ತಪ್ಪಾದ ಮಾಹಿತಿಯನ್ನು ಸೃಷ್ಟಿಸಬಹುದು. ಅಲ್ಲದೆ, ತಪ್ಪು ಮಾಹಿತಿಗಳನ್ನು ಸೃಷ್ಟಿಸಲು ಮಾದರಿಗಳನ್ನು ದುರುಪಯೋಗ ಪಡಿಸಿಕೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಇದನ್ನೂ ಓದಿ : 'ಮಂಕಿ ಪಾಕ್ಸ್' ಇನ್ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಆರೋಗ್ಯದ ಕ್ಷೇತ್ರದಲ್ಲಿ ಎಲ್ಎಲ್ಎಂ ಗಳನ್ನು ಬಳಸುವಾಗ ಸಂಭವಿಸುವ ಅಪಾಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಕಡ್ಡಾಯ. ಪರೀಕ್ಷಿತ ವ್ಯವಸ್ಥೆಗಳಲ್ಲಿ ತ್ವರಿತ ತಂತ್ರಜ್ಞಾನ ಅಳವಡಿಕೆಯು ಆರೋಗ್ಯ-ಆರೈಕೆ ಮೇಲೆ ಪರಿಣಾಮ ಬೀರಬಹುದು. ಜೊತೆಗೆ, ಕೆಲಸಗಾರರಿಂದ ತಪ್ಪುಗಳಾಗುವಂತೆ ಕಾರಣವಾಗಬಹುದು, ರೋಗಿಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ತಿಳಿಸಿದೆ.
ಆತಂಕ ವ್ಯಕ್ತಪಡಿಸಿದ್ದ ಎಐ ಗಾಡ್ಫಾದರ್.. ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಗಾಡ್ಫಾದರ್ ಎಂದೇ ಖ್ಯಾತರಾಗಿರುವ ಜೆಫ್ರಿ ಹಿಂಟನ್ ಕೂಡ ಎಐ ಬಗ್ಗೆ ಆತಂಕ ವ್ಯಕ್ತಪಡಿಸಿ ಇತ್ತೀಚೆಗಷ್ಟೇ ಗೂಗಲ್ಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಭವಿಷ್ಯದಲ್ಲಿ ಈ ತಂತ್ರಜ್ಞಾನದಿಂದ ಆಗಬಹುದಾದ ಅಪಾಯಗಳ ಕುರಿತು ಜಗತ್ತಿಗೆ ತಿಳಿಸಲು ತಾವು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಜೆಫ್ರಿ ತಾವು ರಾಜೀನಾಮೆ ನೀಡಿದ ಬಳಿಕ ತಿಳಿಸಿದ್ದರು ಎಂದು ವರದಿಯಾಗಿತ್ತು.
ಈ ಕುರಿತು ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಮಾತನಾಡಿದ್ದ ಜೆಫ್ರಿ ಹಿಂಟನ್, ''ಆ ತಂತ್ರಜ್ಞಾನವನ್ನು ನಾನು ಮಾಡಿಲ್ಲದಿದ್ದರೆ ಬೇರೆ ಇನ್ಯಾರೋ ಮಾಡಿರುತ್ತಿದ್ದರು ಎಂಬ ಸಾಮಾನ್ಯ ಕ್ಷಮಾಪಣೆಯೊಂದಿಗೆ ನನ್ನನ್ನು ನಾನು ಸಮಾಧಾನ ಪಡಿಸಿಕೊಳ್ಳುತ್ತೇನೆ" ಎಂದು ಹೇಳಿದ್ದರು. ಅಲ್ಲದೆ, ಗೂಗಲ್ ತೊರೆಯುವ ತಮ್ಮ ನಿರ್ಧಾರದ ಬಗ್ಗೆ ಟ್ವೀಟ್ ಮಾಡಿದ್ದ ಅವರು, ಎಐ ತಂತ್ರಜ್ಞಾನದ ಪ್ರತಿಕೂಲ ಪರಿಣಾಮಗಳ ಬಗ್ಗೆ ತಿಳಿಸಲು ಗೂಗಲ್ ತೊರೆದಿದ್ದೇನೆಯೇ ಹೊರತು, ಈ ವಿಷಯದಲ್ಲಿ ನಿರ್ದಿಷ್ಟವಾಗಿ ಗೂಗಲ್ ಕಂಪನಿಯನ್ನು ಗುರಿಯಾಗಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಕಳೆದ ವರ್ಷದಿಂದ ಆರಂಭವಾದ ಈ ಚಾಟ್‌ಜಿಪಿಟಿ ತಂತ್ರಜ್ಞಾನದ ಸ್ಪರ್ಧೆಯಲ್ಲಿ ಈಗಾಗಲೇ ಹಲವಾರು ಬೃಹತ್ ತಂತ್ರಜ್ಞಾನ ಕಂಪನಿಗಳು ಧುಮುಕಿವೆ. ಇವು ತಮ್ಮ ಸಾಫ್ಟವೇರ್ ಆ್ಯಪ್ಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಂಯೋಜನೆಗೆ ಸಂಶೋಧನೆಗಳನ್ನು ನಡೆಸುತ್ತಿವೆ. ಇದರಲ್ಲಿ ಓಪನ್ ಎಐ, ಮೈಕ್ರೊಸಾಫ್ಟ್ ಮತ್ತು ಗೂಗಲ್ ಕಂಪನಿಗಳು ಮುಂಚೂಣಿಯಲ್ಲಿದ್ದರೆ, ಐಬಿಎಂ, ಬೈದು ಮತ್ತು ಟೆನ್ಸೆಂಟ್ಗಳು ಕೂಡ ಇಂಥಹದ್ದೇ ತಂತ್ರಜ್ಞಾನದ ಆವಿಷ್ಕಾರದಲ್ಲಿ ತೊಡಗಿಸಿಕೊಂಡಿವೆ.
ಇದನ್ನೂ ಓದಿ : ಭಾರತದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಮಾಡುವ ಗುರಿ : ವಿಶ್ವ ಆರೋಗ್ಯ ಸಂಸ್ಥೆ