ನ್ಯೂಯಾರ್ಕ್: ಅಮೆರಿಕ ಸುಪ್ರೀಂಕೋರ್ಟ್ ಗರ್ಭಪಾತದ ಹಕ್ಕನ್ನು ವಾಪಸ್ ಪಡೆದಿದೆ. ಅಮೆರಿಕ ಅತ್ಯುನ್ನತ ಕೋರ್ಟ್ ನಿರ್ಧಾರಕ್ಕೆ ವ್ಯಾಪಕ ಪರ ವಿರೋಧ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ದಿನೇ ದಿನೇ ಹೆಚ್ಚಾಗುತ್ತಿರುವ ಗುಂಡಿನ ದಾಳಿ ಬಗ್ಗೆ ಅಮೆರಿಕ ಸರ್ಕಾರವೇ ಚಿಂತಿತವಾಗಿದೆ. ಈ ಸಂಬಂಧ ಬಂದೂಕು ಬಳಕೆ ನಿಯಂತ್ರಣದ ಕಾನೂನು ಮಾಡಲು ಅಮೆರಿಕ ನಿರ್ಧರಿಸಿದೆ.
ಹೀಗೆ ಅಮೆರಿಕಕ್ಕೆ ಅಮೆರಿಕವೇ ಈ ವಿಷಯಗಳ ಮೇಲೆ ನಿಗಿ ನಿಗಿ ಕೆಂಡವಾಗಿದೆ. ಆದರೆ ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಈ ವಿಷಯದಲ್ಲಿ ಭಾರಿ ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಷಯವೇ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟರ್ ಜತೆ 44 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಮಾಡಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ಜೂನ್ 21 ರಂದು ಕೊನೆಯ ಟ್ವೀಟ್ ಮಾಡಿದ ಅವರು ಆ ಬಳಿಕ ಟ್ವೀಟ್ ಗೊಡವೆಗೇ ಹೋಗಿಲ್ಲ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಸ್ಕ್, SpaceX, Neuralink ಮತ್ತು The Boring Co ನಂತಹ ತನ್ನ ಉದ್ಯಮಗಳ ಕುರಿತಾದ ವಿಷಯಗಳ ಬಗ್ಗೆ ಆಗಾಗ್ಗೆ ಟ್ವೀಟ್ ಮಾಡುವ ಇಲ್ಲವೇ ಪ್ರತಿಕ್ರಿಯೆ ನೀಡುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ರಾಜಕೀಯ, ಪಾಪ್ ಸಂಸ್ಕೃತಿ ಮತ್ತು ಪ್ರಪಂಚದ ಘಟನೆಗಳ ಬಗ್ಗೆ ಕಮೆಂಟ್ ಮಾಡಿ ಗಮನ ಸೆಳೆಯುತ್ತಾರೆ.
ಆದರೆ, ಅಮೆರಿಕದಲ್ಲಿನ ಈ ಎರಡು ಪ್ರಮುಖ ಬೆಳವಣಿಗೆಗಳ ಬಗ್ಗೆ ಮಾತ್ರ ಎಲಾನ್ ಮಸ್ಕ್ ಮೌನಕ್ಕೆ ಶರಣಾಗಿದ್ದಾರೆ. ಇದು ಎಲ್ಲ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದೆ. ಎಲ್ಲದರ ಬಗ್ಗೆ ಮಾತನಾಡುವ ನೀವು ಅಮೆರಿಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಜನರು ಪ್ರಶ್ನಿಸಿದ್ದಾರೆ.
ಜೂನ್ 21 ರ ಮೊದಲು, ಮಸ್ಕ್ ಚೀಸ್ ಬಗ್ಗೆ ಕಮೆಂಟ್ ಮಾಡಿದ್ದರು. ಡೊಗೆಕಾಯಿನ್ ಅನ್ನು ಬೆಂಬಲಿಸಿ ಮಾತನಾಡಿದ್ದರು, SpaceX ಮತ್ತು Twitter ನ ವೀಕ್ಷಣೆಗಳನ್ನು ಪೋಸ್ಟ್ ಮಾಡಿದ್ದರು.
ಇದಕ್ಕೂ ಮೊದಲು, ಅವರು ಜಪಾನ್, ಇಟಲಿ, ದಕ್ಷಿಣ ಕೊರಿಯಾ, ಹಾಂಕಾಂಗ್, ಚೀನಾ ಮತ್ತು ಅಮೆರಿಕದಲ್ಲಿ ಜನಸಂಖ್ಯೆಯ ಕುಸಿತದ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ಆದರೆ ಕೆಲ ದಿನಗಳಿಂದ ದಿಢೀರ್ ಮೌನಕ್ಕೆ ಶರಣಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನು ಓದಿ:ಶರ್ಟ್ಲೆಸ್ ಪುಟಿನ್.. 'ನಾವೂ ಸ್ಟ್ರಾಂಗ್' ಎಂದ ಕೆನಡಾ ಪ್ರಧಾನಿ