ಲಂಡನ್: ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಯಾವುದೇ ದಾಳಿ ನಡೆಸದಂತೆ ಇರಾನ್ ಬೆಂಬಲಿತ ಹೌತಿ ಬಂಡುಕೋರರಿಗೆ ಪಾಶ್ಚಿಮಾತ್ಯ ದೇಶಗಳು ಎಚ್ಚರಿಕೆ ನೀಡಿವೆ.
ಹಮಾಸ್ ಉಗ್ರರ ಮೇಲೆ ಇಸ್ರೇಲ್ ಯುದ್ಧಕ್ಕೆ ಪಾಶ್ಚಿಮಾತ್ಯ ದೇಶಗಳು ಬೆಂಬಲ ಘೋಷಿಸಿದ ಬೆನ್ನಲ್ಲೇ ಕಳೆದ ಎರಡು ತಿಂಗಳಿನಿಂದ ಅಂದರೆ 2023ರ ನವೆಂಬರ್ನಿಂದ ಹೌತಿ ಬಂಡುಕೋರರು 20ಕ್ಕೂ ಹೆಚ್ಚು ಬಾರಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ ಎಂದು ಬಿಬಿಸಿ ವರದಿ ತಿಳಿಸಿದೆ.
ಹೌತಿಗಳು ಕ್ಷಿಪಣಿ, ಡ್ರೋನ್, ಫಾಸ್ಟ್ ಬೋಟ್ಸ್ ಮತ್ತು ಹೆಲಿಕ್ಟಾಪರ್ ಬಳಸಿ ಹಡುಗುಗಳ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ, ನಾವು ಇಸ್ರೇಲ್ಗೆ ಸಂಬಂಧಪಟ್ಟ ಹಡಗುಗಳನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡಿದ್ದೇವೆ ಎಂದಿದ್ದಾರೆ.
ಈ ದಾಳಿ ಹಿನ್ನೆಲೆಯಲ್ಲಿ 12 ದೇಶಗಳ ಒಕ್ಕೂಟವು (ಆಸ್ಟ್ರೇಲಿಯಾ, ಬಹೆರಿನ್, ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್, ನ್ಯೂಜಿಲ್ಯಾಂಡ್, ಯುಕೆ, ಯುಎಸ್) ಹೇಳಿಕೆ ಬಿಡುಗಡೆ ಮಾಡಿದ್ದು, ಹೌತಿ ಬಂಡುಕೋರರಿಗೆ ಎಚ್ಚರಿಕೆ ನೀಡಿದೆ. ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿ ಅಪರಾಧ, ಸಹಿಸಲಾಗದ ಮತ್ತು ಅಸ್ಥಿರಗೊಳಿಸುವ ಯತ್ನವಾಗಿದೆ. ನೌಕೆ ಮತ್ತು ನಾಗರಿಕ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಎಚ್ಚರಿಸಿವೆ ಎಂದು ವರದಿ ತಿಳಿಸಿದೆ. ದಾಳಿಯು ಹಡಗು ಸಂಚಾರದ ಸ್ವಾತಂತ್ರ್ಯಕ್ಕೆ ನೇರ ಬೆದರಿಕೆ ಆಗಿದೆ. ಅಲ್ಲದೆ, ದಾಳಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ರಾಷ್ಟ್ರಗಳು ಕರೆ ನೀಡಿದೆ.
ಇಂಟರ್ನ್ಯಾಷನಲ್ ಚೇಂಬರ್ ಆಫ್ ಶಿಪ್ಪಿಂಗ್ ಪ್ರಕಾರ, ಜಗತ್ತಿನ ಶೇ 20ರಷ್ಟು ಕಂಟೈನರ್ ಹಡಗುಗಳು ಕೆಂಪು ಸಮುದ್ರದಲ್ಲಿ ನಡೆಯುತ್ತಿರುವ ದಾಳಿಯಿಂದಾಗಿ ಮಾರ್ಗ ಬದಲಾಯಿಸಿ, ದಕ್ಷಿಣ ಆಫ್ರಿಕಾ ಕಡೆಯಿಂದ ಸಂಚರಿಸುತ್ತಿವೆ. ಕೆಂಪು ಸಮುದ್ರದ ಸರಕು ಹಡಗಿನ ಮೇಲೆ ಹೌತಿ ಉಗ್ರರು ನಡೆಸಿದ ಹೊಸ ದಾಳಿ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಎಚ್ಚರಿಕೆ ನೀಡಿವೆ.
ಸಿಎಂಎ ಸಿಜಿಎಂ ಟಿಎಜಿಇ ಹಡಗಿನ ಮೇಲೆ ದಾಳಿ ನಡೆಸಿರುವುದಾಗಿ ಬುಧವಾರ ಬಂಡುಕೋರರ ವಕ್ತಾರ ಯಹ್ಯಾ ಸರಿಯಾ ನೇರ ಪ್ರಸಾರ ಕಾರ್ಯಕ್ರಮವೊಂದರ ವೇಳೆ ಹೇಳಿಕೊಂಡಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಾಜಾ ಪಟ್ಟಿಯಲ್ಲಿ ಆಹಾರ ಮತ್ತು ಔಷಧ ಪ್ರವೇಶಕ್ಕೆ ಅನುಮತಿ ನೀಡುವವರೆಗೆ ಇಸ್ರೇಲ್ನಿಂದ ಮತ್ತು ಇಸ್ರೇಲ್ ಕಡೆಗೆ ಕೆಂಪು ಸಮುದ್ರ ಮತ್ತು ಅರಬ್ ಸಮುದ್ರದಿಂದ ಹೋಗುವ ಹಡಗುಗಳ ಮೇಲೆ ದಾಳಿ ಮುಂದುವರೆಸುವುದಾಗಿ ಹೌತಿಗಳು ಎಚ್ಚರಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: Explained: ಕೆಂಪು ಸಮುದ್ರ ಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಹೌತಿ ದಾಳಿ; ಪರಿಣಾಮಗಳೇನು?