ಚಾಸಿವ್ ಯಾರ್ (ಉಕ್ರೇನ್) : ರಷ್ಯಾದ ರಾಕೆಟ್ ದಾಳಿಯ ಪರಿಣಾಮ ಪೂರ್ವ ಉಕ್ರೇನ್‌ನಲ್ಲಿ ಅಪಾರ್ಟ್ಮೆಂಟ್ಗಳು ಗಡ ಗಡ ಎಂದು ನಡುಗಿವೆ. ಇದರಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಹತ್ತಾರು ಉಕ್ರೇನಿಯನ್ ತುರ್ತು ಕಾರ್ಯಕರ್ತರು ಅವಶೇಷಗಳ ಅಡಿ ಸಿಲುಕಿ ಸಾವಿಗೀಡಾದವರನ್ನು ಹೊರತೆಗೆಯಲು ಶ್ರಮಿಸಿದ್ದಾರೆ.
ಈ ಘಟನೆಯಲ್ಲಿ ಇನ್ನೂ 20ಕ್ಕೂ ಹೆಚ್ಚು ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಶನಿವಾರ ತಡರಾತ್ರಿ ನಡೆದ ದಾಳಿಯು ಚಾಸಿವ್ ಯಾರ್ ಪಟ್ಟಣದ ವಸತಿ ಕ್ವಾರ್ಟರ್‌ನಲ್ಲಿ ಮೂರು ಕಟ್ಟಡಗಳನ್ನು ನಾಶಪಡಿಸಿದೆ. ಇಲ್ಲಿ ಹೆಚ್ಚಾಗಿ ಹತ್ತಿರದ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರು ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ಭಾನುವಾರ ಸಂಜೆ ಸುಮಾರು 24 ಗಂಟೆಗಳ ಕಾಲ ಅಲ್ಲೇ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲು ರಕ್ಷಕರು ಸಾಕಷ್ಟು ಶ್ರಮ ಪಟ್ಟರು ನಂತರ ಅವನನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ತ್ವರಿತವಾಗಿ ಆಸ್ಪತ್ರೆಗೆ ರವಾನಿಸಿದ್ದರು. ಇದರ ಬೆನ್ನಲ್ಲೇ ಉಕ್ರೇನ್‌ನ ತುರ್ತು ಸೇವೆ ಮೂಲಕ ಅವಶೇಷಗಳಿಂದ ಆರು ಶವಗಳನ್ನು ಹೊರಕ್ಕೆ ತರಲಾಗಿದೆ. ಇದಕ್ಕೂ ಮೊದಲು ಅವಶೇಷಗಳ ಕೆಳಗೆ ಜೀವಂತವಾಗಿ ಸಿಕ್ಕಿಬಿದ್ದಿದ್ದ ಮೂವರನ್ನು ಹೊರ ತಂದಿದ್ದರು.
ಗೋಡೆಗಳು ಸಂಪೂರ್ಣವಾಗಿ ನಾಶ: ಡೊನೆಟ್ಸ್ಕ್ ಪ್ರದೇಶದ ಗವರ್ನರ್ ಪಾವ್ಲೋ ಕೈರಿಲೆಂಕೊ ಈ ಸಂಬಂಧ ಪ್ರತಿಕ್ರಿಯಿಸಿ, 9 ವರ್ಷದ ಮಗು ಸೇರಿದಂತೆ ಅಂದಾಜು 24 ಜನರು ಇನ್ನೂ ಸಿಕ್ಕಿಬಿದ್ದಿದ್ದಾರೆ ಎಂದು ಊಹಿಸಲಾಗಿದೆ. ಇಲ್ಲಿ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಕ್ರೇನ್‌ಗಳು ಮತ್ತು ಅಗೆಯುವವರು ರಕ್ಷಣಾ ತಂಡಗಳು ಬಳಕೆ ಮಾಡಿಕೊಂಡಿವೆ. ದಾಳಿಯಿಂದ ಅದರ ಗೋಡೆಗಳು ಸಂಪೂರ್ಣವಾಗಿ ಇಬ್ಭಾಗವಾಗಿವೆ. ಅಪಾಯಕಾರಿ ಪರಿಸ್ಥಿತಿಯ ನಡುವೆಯೂ ಅದರಲ್ಲೂ ಮಳೆಯ ನಡುವೆಯೂ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಾರಿಸಲಾದ ಉರಾಗನ್ ರಾಕೆಟ್‌ಗಳಿಂದ ಸುಮಾರು 12,000 ಜನರಿದ್ದ ಪಟ್ಟಣ ನಾಶವಾಗಿದೆ. ಚಾಸಿವ್ ಯಾರ್ ಕ್ರಾಮಾಟೋರ್ಸ್ಕ್‌ನ ಆಗ್ನೇಯಕ್ಕೆ 20 ಕಿಲೋಮೀಟರ್ (12 ಮೈಲಿಗಳು) ದೂರದಲ್ಲಿದೆ, ಇದು ರಷ್ಯಾದ ಪಡೆಗಳು ಪಶ್ಚಿಮಕ್ಕೆ ದಾಳಿ ಇಡುವ ವೇಳೆ ಪ್ರಮುಖ ಗುರಿಯಾಗಿದೆ ಎಂದು ವಿವರಿಸಿದ್ದಾರೆ.
ಡೊನೆಟ್ಸ್ಕ್ ಪ್ರದೇಶದ ತುರ್ತು ಸೇವೆಯ ಉಪ ಮುಖ್ಯಸ್ಥ ವಿಯಾಚೆಸ್ಲಾವ್ ಬೊಯಿಟ್ಸೊವ್ ಪ್ರತಿಕ್ರಿಯಿಸಿ, ನಾಲ್ಕು ಶೆಲ್‌ಗಳು ಸಮೀಪದ ಪ್ರದೇಶದ ಮೇಲೆ ದಾಳಿ ಮಾಡಿದವು. ಅವು ಇಸ್ಕಾಂಡರ್ ಕ್ಷಿಪಣಿಗಳಾಗಿರಬಹುದು ಎಂದು ಹೇಳಿದರು.
ಕಿಟಕಿಗಳೆಲ್ಲ ಹಾರಿಹೋಗಿವೆ: ಸ್ಫೋಟದಲ್ಲಿ ಅನೇಕ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ನಿವಾಸಿಗಳು ಹೇಳಿದ್ದಾರೆ. ನೆರೆಹೊರೆಯವರ ಗುಂಪು ಭಾನುವಾರ ಅಂಗಳದಲ್ಲಿ ಕುಳಿತು ಯಾರು ಗಾಯಗೊಂಡರು ಮತ್ತು ಯಾರು ಕಾಣೆಯಾಗಿದ್ದಾರೆ ಎಂದು ಚರ್ಚಿಸಿದ್ದಾರೆ. ಎಲ್ಲ ಕಿಟಕಿಗಳು ಹಾರಿಹೋಗಿವೆ ಮತ್ತು ನಾನು ಸಹ ನೆಲಕ್ಕೆ ಎಸೆಯಲ್ಪಟ್ಟಿದ್ದೇನೆ ಎಂದು 45 ವರ್ಷದ ಒಕ್ಸಾನಾ ಹೇಳಿದ್ದಾರೆ. ಕ್ಷಿಪಣಿಗಳು ಅಪ್ಪಳಿಸಿದಾಗ ಆಕೆ ತನ್ನ ಮೂರನೇ ಮಹಡಿಯ ಅಪಾರ್ಟ್ಮೆಂಟ್ನಲ್ಲಿದ್ದರಂತೆ.
ನನ್ನ ಅಡುಗೆಮನೆಯ ಗೋಡೆಗಳು ಮತ್ತು ಬಾಲ್ಕನಿಯು ಸಂಪೂರ್ಣವಾಗಿ ನಾಶವಾಯಿತು. ನಾನು ಬದುಕಿದ್ದೇನೆ ಎಂದು ಹೇಳಲು ನನ್ನ ಮಕ್ಕಳಿಗೆ ಕರೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
59 ವರ್ಷದ ಐರಿನಾ ಶುಲಿಮೋವಾ ಅವರು ನೋವು ತೋಡಿಕೊಂಡಿದ್ದು, ನಾವು ಯಾವುದೇ ಶಬ್ದವನ್ನು ಕೇಳಿಲ್ಲ. ಆದರೆ, ಅದರ ಪರಿಣಾಮವನ್ನು ಅನುಭವಿಸಿದ್ದೇವೆ. ನಾನು ನನ್ನ ನಾಯಿಗಳೊಂದಿಗೆ ಕಾರಿಡಾರ್‌ನಲ್ಲಿ ಅಡಗಿಕೊಳ್ಳಲು ಓಡಿದೆ. ಏನಾಯಿತು ಎಂದು ತಿಳಿಯಲು ನನಗೆ ತಿಳಿದಿರುವ ಎಲ್ಲರೂ ನನಗೆ ಕರೆ ಮಾಡಲು ಪ್ರಾರಂಭಿಸಿದರು. ಆದರೆ, ನಾನು ನನ್ನ ಮನೆಯಲ್ಲಿ ಎಲೆಯಂತೆ ಅಲುಗಾಡುತ್ತಿದ್ದೆ ಎಂದಿದ್ದಾರೆ.
ಕಳೆದ ವಾರ ಲುಹಾನ್ಸ್ಕ್ನಲ್ಲಿ ಉಕ್ರೇನಿಯನ್ ಪ್ರತಿರೋಧದ ಕೊನೆಯ ಪ್ರಮುಖ ಭದ್ರಕೋಟೆಯಾದ ಲೈಸಿಚಾನ್ಸ್ಕ್ ನಗರವನ್ನು ರಷ್ಯಾ ವಶಪಡಿಸಿಕೊಂಡಿದೆ. ರಷ್ಯಾದ ಪಡೆಗಳು ಡೊನ್ಬಾಸ್ನಲ್ಲಿ ನರಕದರ್ಶನ ತೋರಿಸುತ್ತಿವೆಯಂತೆ ಎಂದು ಲುಹಾನ್ಸ್ಕ್ ಗವರ್ನರ್ ಸೆರ್ಹಿ ಹೈದೈ ಹೇಳಿದ್ದಾರೆ. ಇನ್ನು ರಷ್ಯಾ ಯುದ್ಧದ ಬಗ್ಗೆ ಮಾತನಾಡಿರುವ ಅಧ್ಯಕ್ಷ ಝೆಲೆನ್ಸ್ಕಿ, ಪುಟಿನ್ ಉಕ್ರೇನ್‌ನಲ್ಲಿ ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: 2022ರ ಟ್ರೆಂಡಿಂಗ್ ಶಬ್ದಗಳು.. ಗೊತ್ತಿಲ್ಲದೇ ಬೆಪ್ಪಾಗಬೇಡಿ.. ಈಗಲೇ ತಿಳಿದುಕೊಳ್ಳಿ