ಟೋಕಿಯೊ: ಜಪಾನ್‌ನ ದಕ್ಷಿಣದ ದ್ವೀಪವಾದ ಕ್ಯುಶುನಲ್ಲಿ ಭಾನುವಾರ ರಾತ್ರಿ ಸಕುರಾಜಿಮಾ ಜ್ವಾಲಾಮುಖಿ ಸ್ಫೋಟಿಸಿದ್ದು, ಕಾಗೋಶಿಮಾ ದಕ್ಷಿಣ ಪ್ರಾಂತ್ಯದಲ್ಲಿ ಜ್ವಾಲಾಮುಖಿಯಿಂದ 2.5 ಕಿಲೋಮೀಟರ್(1.5 ಮೈಲಿಗಳು)ವರೆಗೆ ದೊಡ್ಡ ಬಂಡೆಗಳು ಬಿದ್ದಿವೆ. ಹತ್ತಿರ ಎರಡು ಪಟ್ಟಣಗಳ ಜನರನ್ನು ಸ್ಥಳಾಂತರಿಸಲಾಗಿದೆ. ಇದುವರೆಗೆ ಯಾವುದೇ ಹಾನಿ ಅಥವಾ ಗಾಯಗಳಾಗಿರುವ ಕುರಿತು ವರದಿಯಾಗಿಲ್ಲ ಎಂದು ಜಪಾನ್‌ನ ಹವಾಮಾನ ಸಂಸ್ಥೆ ತಿಳಿಸಿದೆ.
ಸೋಮವಾರ ಬೆಳಗ್ಗೆ ವಾತಾವರಣ ಕೆಟ್ಟದಾಗಿದ್ದ ಕಾರಣ ಜ್ವಾಲಾಮುಖಿಯ ಕುಳಿ ಅಸ್ಪಷ್ಟವಾಗಿತ್ತು. ಜಪಾನ್‌ನ NHK ಪಬ್ಲಿಕ್ ಟೆಲಿವಿಷನ್‌ನಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ದೃಶ್ಯಾವಳಿಗಳು ಪ್ರಸಾರಗೊಂಡಿದ್ದು, ಅದರಲ್ಲಿ ಜ್ವಾಲಾಮುಖಿಯ ಕುಳಿಯ ಬಳಿ ಕಿತ್ತಳೆ ಬಣ್ಣದ ಜ್ವಾಲೆಗಳು ಮಿನುಗುತ್ತಿರುವುದು ಮತ್ತು ಪರ್ವತದ ತುದಿಯಲ್ಲಿ ಬೂದಿಯ ಜೊತೆಗೆ ಗಾಢ ಹೊಗೆಯುಗುಳುವುದನ್ನು ತೋರಿಸಲಾಗಿದೆ.
ಜಪಾನ್‌ನ ಹವಾಮಾನ ಸಂಸ್ಥೆ ಸ್ಫೋಟದ ಎಚ್ಚರಿಕೆಯನ್ನು ಐದಕ್ಕಿಂತ ಹೆಚ್ಚಿನ ಮಟ್ಟಕ್ಕೆ ಏರಿಸಿದ್ದು, ಜ್ವಾಲಾಮುಖಿ ಸ್ಫೋಟಗೊಂಡ ಪ್ರದೇಶದ ಎರಡು ಪಟ್ಟಣಗಳಲ್ಲಿನ 51 ನಿವಾಸಿಗಳಿಗೆ ತಮ್ಮ ಮನೆಗಳನ್ನು ತೊರೆಯುವಂತೆ ಸಲಹೆ ನೀಡಿದೆ. ಸೋಮವಾರ ಬೆಳಗಿನ ವೇಳೆಗೆ, ಅವರಲ್ಲಿ 33 ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ.
ಕುಳಿಯ 3 ಕಿಲೋಮೀಟರ್ (1.8 ಮೈಲಿಗಳು) ಒಳಗೆ ಜ್ವಾಲಾಮುಖಿ ಬಂಡೆಗಳು ಬೀಳುವ ಸಾಧ್ಯತೆ ಇದ್ದು, 2 ಕಿಲೋಮೀಟರ್ (1.2 ಮೈಲಿಗಳು) ಒಳಗೆ ಲಾವಾ, ಬೂದಿ ಮತ್ತು ಸೀರಿಂಗ್ ಅನಿಲದ ಸಂಭವನೀಯ ಹರಿವಿನ ಬಗ್ಗೆ JMA ಎಚ್ಚರಿಕೆ ನೀಡಿದೆ. ಹೆಚ್ಚು ಹಿಂಸಾತ್ಮಕ ಸ್ಫೋಟಗಳ ಸಾಧ್ಯತೆಗಳು ಕಡಿಮೆ. ಆದರೆ, ಬೀಳುವ ಬಂಡೆಗಳು, ಮಣ್ಣು ಕುಸಿತ ಮತ್ತು ಪೈರೋಕ್ಲಾಸ್ಟಿಕ್ ಹರಿವಿನ ಬಗ್ಗೆ ನಿವಾಸಿಗಳು ಇನ್ನೂ ಜಾಗರೂಕರಾಗಿರಬೇಕು ಎಂದು ಜ್ವಾಲಾಮುಖಿ ವೀಕ್ಷಣೆಯ ಉಸ್ತುವಾರಿ JMA ಅಧಿಕಾರಿ ತ್ಸುಯೋಶಿ ನಕಾಟ್ಸುಜಿ ಎಚ್ಚರಿಸಿದ್ದಾರೆ.
ನಾವು ಮೊದಲು ಜನರ ಜೀವವನ್ನು ಕಾಪಾಡಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತೇವೆ. ನಂತರ ಯಾವುದೇ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸಲು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತೇವೆ ಎಂದು ಉಪ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಹಿಕೊ ಐಸೊಜಾಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ನಿವಾಸಿಗಳ ಜೀವಗಳನ್ನು ರಕ್ಷಿಸಲು, ಸ್ಥಳೀಯ ಅಧಿಕಾರಿಗಳು ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕೆಂದು ಕರೆ ನೀಡಿದರು.
ಕ್ಯುಶುವಿನ ಮುಖ್ಯ ದಕ್ಷಿಣ ದ್ವೀಪದಲ್ಲಿರುವ ಸಕುರಾಜಿಮಾ ಜಪಾನ್‌ನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ. ಇದು ಪದೇ ಪದೇ ಸ್ಫೋಟಗೊಂಡಿತ್ತು. 1914ರಲ್ಲಿ 58 ಜನರ ಜೀವವನ್ನು ಬಲಿತೆಗೆದುಕೊಂಡ ಸ್ಫೋಟ ಸಂಭವಿಸಿದ ನಂತರ ದ್ವೀಪವಾಗಿದ್ದ ಇದು ನಂತರ ಪರ್ಯಾಯ ದ್ವೀಪವಾಯಿತು. ಸಕುರಾಜಿಮಾ ಟೋಕಿಯೊದ ನೈಋತ್ಯಕ್ಕೆ ಸುಮಾರು 1,000 ಕಿಲೋಮೀಟರ್ (600 ಮೈಲಿಗಳು) ದೂರದಲ್ಲಿದೆ.
ಇದನ್ನೂ ಓದಿ : ಅಮೆರಿಕದ ಹೂವರ್ ಡ್ಯಾಮ್ನಲ್ಲಿ ಸ್ಫೋಟ, ಕಾಣಿಸಿಕೊಂಡ ಅಗ್ನಿಜ್ವಾಲೆ