ಪ್ರೊವೊ, ಉತಾಹ್, ಅಮೆರಿಕ: ಅಮೆರಿಕ ಅಧ್ಯಕ್ಷ ಉತಾಹ್ ರಾಜ್ಯದ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಉತಾಹ್ ರಾಜ್ಯದ ಪ್ರೊವೊದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ನಿನ್ನೆ ಬೆಳಗ್ಗೆ ಎಫ್‌ಬಿಐ ಅಧಿಕಾರಿಗಳು ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಹೊಡೆದುರುಳಿಸಿದ್ದಾರೆ.
ಅಧ್ಯಕ್ಷ ಜೋ ಬೈಡನ್‌ಗೆ ಕೊಲೆ ಬೆದರಿಕೆ: ಸಾಲ್ಟ್ ಲೇಕ್ ಸಿಟಿಯ ದಕ್ಷಿಣದ ಪ್ರೊವೊದ ನಿವಾಸಿ ಕ್ರೇಗ್ ಡೆಲೀವ್ ರಾಬರ್ಟ್‌ಸನ್ ಅವರ ಮನೆ ಇದೆ. ಅಧ್ಯಕ್ಷ ಜೋ ಬೈಡನ್ ಅವರನ್ನು ಕೊಲೆ ಮಾಡುವುದಾಗಿ ರಾಬರ್ಟ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ಈ ಪ್ರಕರಣದ ಬಗ್ಗೆ ರಾಬರ್ಟ್ ಅನ್ನು ವಿಚಾರಿಸಲು ಎಫ್‌ಬಿಐ ಅಧಿಕಾರಿಗಳು ರಾಬರ್ಟ್ ಮನೆಗೆ ಭೇಟಿ ನೀಡಿದ್ದರು. ರಾಬರ್ಟ್ಗೆ ಎಫ್ಬಿಐನ ವಿಶೇಷ ಏಜೆಂಟ್‌ಗಳು ವಾರಂಟ್ ನೀಡಲು ಪ್ರಯತ್ನಿಸುತ್ತಿದ್ದರು. ಈ ವೇಳೆ, ಗುಂಡಿನ ದಾಳಿ ಸಂಭವಿಸಿದ್ದು, ಆರೋಪಿ ರಾಬರ್ಟ್ ಮೃತಪಟ್ಟದ್ದಾನೆ ಎಂದು ಎಫ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಎಫ್‌ಬಿಐ: ಈ ಘಟನೆ ಬಗ್ಗೆ ಎಫ್‌ಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ರಾಬರ್ಟ್‌ಸನ್ ಶಸ್ತ್ರಸಜ್ಜಿತರಾಗಿದ್ದರು. ರಾಬರ್ಟ್‌ಸನ್ ಸೋಮವಾರ ಆನ್‌ಲೈನ್‌ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದರು. ಅವರು ಮಾಡಿದ್ದ ಪೋಸ್ಟ್‌ನಲ್ಲಿ ಬೈಡನ್ ಅವರು ಉತಾಹ್‌ಗೆ ಬರುತ್ತಿರುವುದನ್ನು ಖಚಿತ ಪಡಿಸಿಕೊಂಡಿದ್ದರು. ಮತ್ತೊಂದು ಪೋಸ್ಟ್‌ನಲ್ಲಿ, ರಾಬರ್ಟ್‌ಸನ್ ತನ್ನನ್ನು MAGA ಟ್ರಂಪರ್ ಎಂದು ಉಲ್ಲೇಖಿಸಿಕೊಂಡಿದ್ದಾರೆ. ಇದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮೇಕ್ ಅಮೆರಿಕ ಗ್ರೇಟ್ ಎಗೇನ್ ಘೋಷಣೆಯನ್ನು ಉಲ್ಲೇಖಿಸುತ್ತದೆ. ಅಷ್ಟೇ ಅಲ್ಲ ಅವರ ಮನೆಯಲ್ಲಿ m24 ಸ್ನೈಪರ್ ರೈಫಲ್ ದೊರೆತಿದೆ ಎಂದು ಎಫ್‌ಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಗಳಲ್ಲಿ ಉಲ್ಲೇಖಿಸಿದೆ.
ಉತಾಹ್ ನಿವಾಸಿ ರಾಬರ್ಟ್‌ಸನ್ ಅಧ್ಯಕ್ಷ ಜೋ ಬೈಡನ್ ಅವರ ಹತ್ಯೆಯನ್ನು ಸಹ ಉಲ್ಲೇಖಿಸಿದ್ದಾರೆ. ಟ್ರಂಪ್ ವಿರುದ್ಧದ ನ್ಯಾಯಾಲಯದ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುವ ಉನ್ನತ ಕಾನೂನು ಜಾರಿ ಅಧಿಕಾರಿಗಳ ವಿರುದ್ಧ ಸೇರಿದಂತೆ ಇತರ ಆನ್‌ಲೈನ್ ಬೆದರಿಕೆಗಳ ಬಗ್ಗೆ ಎಫ್‌ಬಿಐ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಯಾರೀ ರಾಬರ್ಟ್‌ಸನ್: ರಾಬರ್ಟ್‌ಸನ್ ಒಬ್ಬರು ಕಸ್ಟಮ್ ಮರಗೆಲಸ ವ್ಯಾಪಾರ ಮಾಡುವ ಉದ್ಯಮಿ. ಆದರೆ, ರಾಜ್ಯ ದಾಖಲೆಗಳ ಪ್ರಕಾರ ಕಳೆದ ವರ್ಷ ತಮ್ಮ ವ್ಯಾಪಾರಕ್ಕೆ ನೀಡಿದ ಲೈಸೆನ್ಸ್ ಅವಧಿ ಮುಗಿದಿದೆ. ಆದರೆ ಅವರಿಗೆ ನೀಡಿದ ಪರವಾನಗಿಯನ್ನು ಅಪ್ಡೇಟ್ ಮಾಡಿಸಿಲ್ಲ. ಲಿಂಕ್ಡ್‌ಇನ್‌ನಲ್ಲಿ ರಾಬರ್ಟ್‌ಸನ್ ಅವರು 45 ವರ್ಷಗಳ ಕಾಲ ಸ್ಟ್ರಕ್ಚರಲ್ ಸ್ಟೀಲ್ ಮತ್ತು ವೆಲ್ಡಿಂಗ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿರುವುದಾಗಿ ಬರೆದುಕೊಂಡಿದ್ದಾರೆ. ನಿವೃತ್ತಿ ಬಳಿಕ ರಾಬರ್ಟ್ ಮರಗೆಲಸದ ಉದ್ಯಮಿ ಪ್ರಾರಂಭಿಸಿದ್ದಾರೆ. ಅವರು ಕಸ್ಟಮ್ ವಿನ್ಯಾಸಗಳಲ್ಲಿ ಪರಿಣತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕ ಅಧ್ಯಕ್ಷ ಬೈಡನ್ ಪ್ರವಾಸ: ಬೈಡನ್ ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ಪ್ರವಾಸದ ಮಧ್ಯದಲ್ಲಿದ್ದಾರೆ. ಅವರು ಬುಧವಾರ ನ್ಯೂ ಮೆಕ್ಸಿಕೋದಲ್ಲಿ ವಾಸ್ತವ್ಯ ಹೂಡಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಂದು ಉತಾಹ್‌ಗೆ ಭೇಟಿ ನೀಡಲು ಎನ್ನಲಾಗಿದೆ. ಅದಕ್ಕೂ ಮುನ್ನವೇ ಎನ್ಕೌಂಟರ್ ನಡೆದಿದ್ದು, ಎಫ್‌ಬಿಐ ಅಧಿಕಾರಿಗಳು ಶಂಕಿತ ವ್ಯಕ್ತಿಯನ್ನು ಹೊಡೆದುರುಳಿಸಿದ್ದಾರೆ.
ಓದಿ: ಬ್ರೆಜಿಲ್ನಲ್ಲಿದ್ದಾರೆ 1.7 ಮಿಲಿಯನ್ ಬುಡಕಟ್ಟು ಜನರು: ಹಿಂದಿನ ಜನಗಣತಿಗಿಂತ ದುಪ್ಪಟ್ಟು ಏರಿಕೆ