ನೆವಾರ್ಕ್ (ಅಮೆರಿಕ): ಬುಧವಾರ ಬೆಳಗ್ಗೆ ನ್ಯೂಜೆರ್ಸಿಯ ನೆವಾರ್ಕ್‌ನಲ್ಲಿರುವ ಮಸೀದಿಯ ಹೊರಗೆ ಇಮಾಮ್ರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ನೆವಾರ್ಕ್‌ನ ಮುಹಮ್ಮದ್ ಮಸೀದಿಯ ಹೊರಗಡೆ ಇಮಾಮ್ ಹಸನ್ ಷರೀಫ್ ಎಂಬುವರ ಮೇಲೆ ಗುಂಡು ಹಾರಿಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಮುಂಜಾನೆ ಪ್ರಾರ್ಥನೆಯ ನಂತರ ಗುಂಡಿನ ದಾಳಿ ನಡೆದಿದೆ. ಪೊಲೀಸರು ಬಂದೂಕುಧಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೃತರ ಹೊಟ್ಟೆ ಮತ್ತು ಬಲಗೈಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಟೆಡ್ ಸ್ಟೀಫನ್ಸ್, ರಾಜ್ಯದ ಅತಿದೊಡ್ಡ ನಗರವಾದ ನೆವಾರ್ಕ್‌ನ ಮುಹಮ್ಮದ್ ಮಸೀದಿ ಬಳಿ ಬೆಳಗ್ಗೆ 6 ಗಂಟೆಗೆ ಇಮಾಮ್ ಹಸನ್ ಷರೀಫ್ ಅವರ ಕಾರಿನ ಮೇಲೆ ಒಂದಕ್ಕಿಂತ ಹೆಚ್ಚು ಬಾರಿ ಗುಂಡು ಹಾರಿಸಲಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
"ಮುಸ್ಲಿಂ ಸಮುದಾಯದ ಸದಸ್ಯರ ವಿರುದ್ಧ ಪಕ್ಷಪಾತ, ಹಿಂಸಾಚಾರದಂತಹ ಘಟನೆಗಳು ಸಂಭವಿಸುತ್ತಿರುವುದು ರಾಜ್ಯದಲ್ಲಿ ಭಯ ಮತ್ತು ಕಳವಳವನ್ನು ಹೆಚ್ಚಿಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಎಲ್ಲಾ ದೃಷ್ಠಿಕೋನದಿಂದಲೂ ಸಂಪೂರ್ಣವಾಗಿ ತನಿಖೆ ಮಾಡಲಾಗುವುದು" ಎಂದು ನ್ಯೂಜೆರ್ಸಿ ಅಟಾರ್ನಿ ಜನರಲ್ ಮ್ಯಾಥ್ಯೂ ಪ್ಲಾಟ್ಕಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಷರೀಫ್ ಅವರು ಐದು ವರ್ಷಗಳಿಂದ ಸ್ಥಳೀಯ ಮಸೀದಿಯಲ್ಲಿ ಇಮಾಮ್ ಆಗಿದ್ದರು. ನಗರವನ್ನು ಸುರಕ್ಷಿತವಾಗಿಡಲು ಶ್ರಮಿಸಿದ ಸರ್ವಧರ್ಮೀಯ ಸಮುದಾಯದ ನಾಯಕ ಎಂದು ನೆವಾರ್ಕ್ ಪಬ್ಲಿಕ್ ಸೇಫ್ಟಿ ಡೈರೆಕ್ಟರ್ ಫ್ರಿಟ್ಜ್ ಫ್ರಾಗ್ ಅವರು ಸ್ಮರಿಸಿದರು.
ಇದನ್ನೂ ಓದಿ : ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ನಿವೃತ್ತ ಶಿಕ್ಷಕಿ ಹತ್ಯೆ : ಆರೋಪಿ ಅಂದರ್
ಪೊಲೀಸರು ಪ್ರಸ್ತುತ ದುಷ್ಕರ್ಮಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಯಾವ ಉದ್ದೇಶದಿಂದ ಶೂಟ್ ಮಾಡಲಾಗಿದೆ ಎಂದು ಸೂಚಿಸುವ ಯಾವುದೇ ಪುರಾವೆಗಳು ಇದುವರೆಗೆ ಲಭ್ಯವಾಗಿಲ್ಲ. ಷರೀಫ್ ಅವರು ನಾಯಕತ್ವ ಮತ್ತು ಶ್ರೇಷ್ಠತೆಯ ದಾರಿದೀಪ ಎಂದು ಮುಸ್ಲಿಂ ವಕೀಲರ ಗುಂಪಾದ ಕೌನ್ಸಿಲ್ ಆನ್ ಅಮೇರಿಕನ್-ಇಸ್ಲಾಮಿಕ್ ರಿಲೇಶನ್ಸ್ (CAIR) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.