ಪ್ಯೊಂಗ್ಯಾಂಗ್( ಉತ್ತರ ಕೊರಿಯಾ): ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳಿಗೆ ಸವಾಲೆಸೆದಿರುವ ಉತ್ತರ ಕೊರಿಯಾ ಮತ್ತೊಮ್ಮೆ ತನ್ನ ಶಸ್ತ್ರಾಸ್ತ್ರ ಸಂಗ್ರಹದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಉತ್ತರ ಕೊರಿಯಾವು ಅದರ ಆಡಳಿತಗಾರ ಕಿಮ್ ಜಾಂಗ್ ಉನ್ ನೇತೃತ್ವದಲ್ಲಿ ಎಂಟು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒಂದರ ನಂತರ ಒಂದರಂತೆ ಪೂರ್ವ ಕರಾವಳಿಯಿಂದ ಸಮುದ್ರದ ಕಡೆಗೆ ಹಾರಿಸಿವೆ.
ಉತ್ತರ ಕೊರಿಯಾದ ಈ ಕ್ಷಿಪಣಿ ಪರೀಕ್ಷೆಯು ಅಮೆರಿಕಕ್ಕೆ ನೇರವಾಗಿ ಸವಾಲು ಹಾಕುವಂತಿದೆ. ಉತ್ತರ ಕೊರಿಯಾದ ಯಶಸ್ವಿ ಕ್ಷಿಪಣಿ ಪರೀಕ್ಷೆಯನ್ನು ದೃಢೀಕರಿಸಿದ ಸುದ್ದಿ ಸಂಸ್ಥೆಗಳು, ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡೆಸಿದ ಸಮರಾಭ್ಯಾಸದ ಒಂದು ದಿನದ ಬಳಿಕ ಕಿಮ್ ಸರ್ಕಾರವು ಈ ಪರೀಕ್ಷೆ ನಡೆಸಿತು ಎಂದು ಹೇಳಿವೆ.
ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ: ಉತ್ತರ ಕೊರಿಯಾ ಭಾನುವಾರ ಒಂದರ ಹಿಂದೆ ಒಂದರಂತೆ ಎಂಟು ಕಡಿಮೆ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಮುದ್ರದ ಕಡೆಗೆ ಉಡಾಯಿಸಿದೆ. ದಕ್ಷಿಣ ಕೊರಿಯಾದ ಸೇನೆ ಈ ಮಾಹಿತಿ ನೀಡಿದೆ. ರಾಜಧಾನಿ ಪ್ಯೊಂಗ್ಯಾಂಗ್ ಬಳಿಯ ಸುನಾನ್ ಪ್ರದೇಶದಿಂದ 35 ನಿಮಿಷಕ್ಕೂ ಹೆಚ್ಚು ಕಾಲ ಎಂಟು ಕ್ಷಿಪಣಿಗಳ ಪರೀಕ್ಷೆ ನಡೆಸಲಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ.
ಓದಿ: ಭಾರತ-ವಿಯೆಟ್ನಾಂ ರಾಜತಾಂತ್ರಿಕಗೆ 50 ವರ್ಷ : ಭಾರಿ ನಿರೀಕ್ಷೆ ಹುಟ್ಟು ಹಾಕಿದ ಸಚಿವ ರಾಜನಾಥ್ ಪ್ರವಾಸ
8 ಕ್ಷಿಪಣಿಗಳ ಪರೀಕ್ಷೆ: ಪರಿಕ್ಷಿಸಲಾದ ಈ ಕ್ಷಿಪಣಿಗಳು ಎಷ್ಟು ದೂರದವರೆಗೆ ಕ್ರಮಿಸಿವೆ ಎಂಬ ಬಗ್ಗೆ ದಕ್ಷಿಣ ಕೊರಿಯಾದ ಸೇನೆ ಸ್ಪಷ್ಟತೆ ನೀಡಿಲ್ಲ. ಕ್ಷಿಪಣಿಗಳ ಉಡಾವಣೆ ಯಶಸ್ವಿಯಾದ ಬಳಿಕ ದಕ್ಷಿಣ ಕೊರಿಯಾದ ಸೇನೆ ತನ್ನ ಕಣ್ಗಾವಲು ಹೆಚ್ಚಿಸಿದೆ. 2022 ರಲ್ಲಿ ಉತ್ತರ ಕೊರಿಯಾ 18 ನೇ ಸುತ್ತಿನ ಕ್ಷಿಪಣಿ ಪರೀಕ್ಷೆ ನಡೆಸಿದೆ.
ಪರಮಾಣು ಪರೀಕ್ಷೆಗೆ ಸಿದ್ಧತೆ: ಈ ಪರೀಕ್ಷೆಯಿಂದ ಆರ್ಥಿಕ ಮತ್ತು ಭದ್ರತಾ ರಿಯಾಯಿತಿಗಳ ಮಾತುಕತೆಗೆ ಅಮೆರಿಕವನ್ನು ಒತ್ತಾಯಿಸುವುದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಸಿದ್ಧಾಂತದ ಉದ್ದೇಶವಾಗಿದೆ ಎಂದು ತಜ್ಞರು ಹೇಳುತ್ತಾರೆ. ದಕ್ಷಿಣ ಕೊರಿಯಾ ಮತ್ತು ಯುಎಸ್ ಅಧಿಕಾರಿಗಳು ಉತ್ತರ ಕೊರಿಯಾ ಈಶಾನ್ಯ ನಗರದಲ್ಲಿರುವ ತನ್ನ ಪರಮಾಣು ಪರೀಕ್ಷಾ ಕೇಂದ್ರದಲ್ಲಿ ಹೆಚ್ಚಿನ ಭದ್ರತಾ ಸಿದ್ಧತೆ ಕೈಗೊಂಡಿದೆ ಎಂದು ತಿಳಿದು ಬಂದಿದೆ.