ಲಾಸ್ ಏಂಜಲೀಸ್ (ಅಮೆರಿಕ): ದೇಶದಲ್ಲಿ ಕೋವಿಡ್ ಸಾರ್ವಜನಿಕ ಆರೋಗ್ಯ ಪರಿಸ್ಥಿತಿ (ಪಿಹೆಚ್ಇ) ಗುರುವಾರ ಕೊನೆಗೊಂಡಿತು. ಇದು ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪರಿವರ್ತನೆ. ತಾತ್ಕಾಲಿಕ ಕ್ರಮಗಳನ್ನು ಜಾರಿಗೆ ತರಲು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಪರಿಕರ ಮತ್ತು ಸಿಬ್ಬಂದಿ ನಿಯೋಜಿಸಲು ಜನವರಿ 2020ರಲ್ಲಿ ಆಗಿನ ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಅಲೆಕ್ಸ್ ಅಝರ್ ಅವರು ಪಿಹೆಚ್ಇ ಘೋಷಿಸಿದ್ದರು.
2021ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪದೇ ಪದೇ ತುರ್ತು ಪರಿಸ್ಥಿತಿ ವಿಸ್ತರಿಸಿ ಆದೇಶಿಸಿದ್ದರು. ಸದ್ಯ ಲಸಿಕೆಗಳ ಲಭ್ಯತೆ, ಆ್ಯಂಟಿವೈರಲ್ ಚಿಕಿತ್ಸೆಗಳು ಮತ್ತು ವೈರಸ್ಗೆ ವ್ಯಾಪಕವಾಗಿ ಒಡ್ಡಿಕೊಳ್ಳುವುದರಿಂದ ಕೋವಿಡ್ ಸಾವುಗಳು ಮತ್ತು ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಕಾರಣ ಬೈಡನ್ ಸರ್ಕಾರ ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದೆ.
1.1(11 ಲಕ್ಷ) ಮಿಲಿಯನ್ ಮಂದಿ ಸಾವು: ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ದ ಮಾಹಿತಿಯ ಪ್ರಕಾರ ದೇಶದಲ್ಲಿ ಸಾಂಕ್ರಾಮಿಕ ರೋಗದಿಂದ ಕನಿಷ್ಠ 6 ಮಿಲಿಯನ್ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು 1.1 ಮಿಲಿಯನ್ ಮಂದಿ ಸಾವಿಗೀಡಾಗಿದ್ದಾರೆ. ತುರ್ತು ತುರ್ತು ಪರಿಸ್ಥಿತಿ ಅಂತ್ಯದಿಂದ ವೈರಸ್ಗೆ ದೇಶವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತದೆ. ವೈರಸ್ ಪತ್ತೆ ಹಚ್ಚಲು ಸಿಡಿಸಿ ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತದೆ. ಲಸಿಕೆಗಳು, ಚಿಕಿತ್ಸೆ ಮತ್ತು ಪರೀಕ್ಷೆಯಂತಹ ಹೆಚ್ಚಿನ ಪರಿಕರಗಳು ಲಭ್ಯವಿರುತ್ತವೆ. ಆದರೆ ಕೆಲವು ಡೇಟಾ ಮೂಲಗಳು ಮತ್ತು ವರದಿ ಮಾಡುವಿಕೆಯಂತಹ ಕೆಲವು ಉಪಕ್ರಮಗಳು ಬದಲಾಗುತ್ತವೆ. ಫೆಡರಲ್ ಉದ್ಯೋಗಿಗಳು, ಫೆಡರಲ್ ಗುತ್ತಿಗೆದಾರರು ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಅಗತ್ಯವಿಲ್ಲ ಎಂದು ಅಮೆರಿಕ ಸರ್ಕಾರ ಹೆಳಿದೆ.
"ಸಾರ್ವಜನಿಕ ಆರೋಗ್ಯ ತಜ್ಞರು ಕೋವಿಡ್ ವಿರುದ್ಧ ಹೋರಾಡಲು ದೇಶವು ಇನ್ನೂ ಹಲವು ಸಾಧನಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಅಲ್ಲದೇ ರಾಷ್ಟ್ರದ ಜರ್ಜರಿತ ಆರೋಗ್ಯ ವ್ಯವಸ್ಥೆಗೆ ವೈರಸ್ ನಿರಂತರ ಬೆದರಿಕೆಯಾಗಿ ಉಳಿಯುತ್ತದೆ" ಎಂದು ಅವರು ಎಚ್ಚರಿಸಿದ್ದಾರೆ.
ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಅಂತ್ಯ: ವಿಶ್ವವನ್ನೇ ನಲುಗಿಸಿದ್ದ ಮಾರಕ ಕೋವಿಡ್ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಇತ್ತೀಚೆಗೆ(ಮೇ 5) ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಅಂತ್ಯಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿತ್ತು. 3 ವರ್ಷಗಳ ಹಿಂದೆ ಡಬ್ಲ್ಯೂಹೆಚ್ಒ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿತ್ತು.
ಕೊರೊನಾ ಸೋಂಕು ನಿಧಾನವಾಗಿ ತನ್ನ ಅಬ್ಬರವನ್ನು ಕಳೆದುಕೊಳ್ಳುತ್ತಿದೆ ಎಂಬುವುದಕ್ಕೆ ಡಬ್ಲ್ಯೂಹೆಚ್ಒ ಹೇಳಿಕೆ ಪುಷ್ಠಿ ನೀಡಿದೆ. ಸದ್ಯ ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ಜಾಗತಿಕ ಮಟ್ಟದಲ್ಲಿ ಹೊಸ ಆಶಾಕಿರಣ ಮೂಡುವಂತೆ ಮಾಡಿದೆ. ಮೇ 5ರಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿ 15ನೇ ಬಾರಿಗೆ ಸಭೆ ಸೇರಿತ್ತು. ಸಭೆಯಲ್ಲಿ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸುವಂತೆ ಶಿಫಾರಸು ಮಾಡಲಾಗಿತ್ತು. ಅದರಂತೆ ಡಬ್ಲ್ಯೂಹೆಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕೋವಿಡ್- 19 ಜಾಗತಿಕ ಆರೋಗ್ಯ ಪರಿಸ್ಥಿತಿ ಅಂತ್ಯಗೊಂಡಿದೆ ಎಂದು ಘೋಷಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಡಬ್ಲ್ಯೂಹೆಚ್ಒ ಮುಖ್ಯಸ್ಥ ಟೆಡ್ರೊಸ್, "ಕೋವಿಡ್ ಅಬ್ಬರ ಕಡಿಮೆಯಾಯಿತು ಎಂಬ ಮಾತ್ರಕ್ಕೆ ನಾವು ಈ ಹಿಂದೆ ರಚಿಸಿದ್ದ ಸೋಂಕಿನ ವಿರುದ್ಧದ ಎಲ್ಲಾ ರಕ್ಷಣಾ ಕ್ರಮಗಳನ್ನು ತೆಗೆದು ಹಾಕುವುದು ತಪ್ಪು. ಸೋಂಕು ಹೆಚ್ಚಿದರೆ ತುರ್ತುಪರಿಸ್ಥಿತಿ ಮರು ಘೋಷಿಸಲಾಗುವುದು" ಎಂದು ತಿಳಿಸಿದ್ದಾರೆ. 2020ರ ಜನವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಸೋಂಕನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಘೋಷಿಸಿತ್ತು.
ಇದನ್ನೂ ಓದಿ: Explained: ಕೋವಿಡ್ 19 ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ವಾ; ವಿಶ್ವ ಆರೋಗ್ಯ ಸಂಸ್ಥೆ ಈ ರೀತಿ ಘೋಷಿಸಿದ್ದೇಕೆ?